ಮಧ್ಯಪ್ರದೇಶ, ಮಾ. 06 (DaijiworldNews/AA): ಯುಪಿಎಸ್ಸಿ ಪರೀಕ್ಷೆಯು ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಎಲ್ಲಾ ಅಭ್ಯರ್ಥಿಗಳ ಕನಸಾಗಿರುತ್ತದೆ. ಹೀಗೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ತಮ್ಮ ಕನಸನ್ನು ನನಸಾಗಿಸಿಕೊಂಡ ಫರ್ಖಂಡಾ ಖುರೇಷಿ ಅವರ ಯಶೋಗಾಥೆ ಇದು.

ಫರ್ಖಂಡಾ ಖುರೇಷಿ ಮಧ್ಯಪ್ರದೇಶದ ಸಣ್ಣ ಪಟ್ಟಣವಾದ ಬಾಲಘಾಟ್ ಮೂಲದವರು. ಬಾಲಾಘಾಟ್ನ ಸೈಂಟ್ ಮೇರಿಸ್ ಶಾಲೆಯಲ್ಲಿ 10ನೇ ತರಗತಿ ಹಾಗೂ ಮೆಥೋಡಿಸ್ಟ್ ಮಿಷನ್ನಲ್ಲಿ 12ನೇ ತರಗತಿ ಪೂರೈಸಿದರು. ಅವರ ತಂದೆ ಅಬ್ದುಲ್ ಮಲಿಕ್ ಖುರೇಷಿ ವಕೀಲರು ಹಾಗೂ ತಾಯಿ ನಿಖತ್ ಅಂಜುಮ್ ಖುರೇಷಿ ಗೃಹಿಣಿ.
ಫರ್ಖಂಡಾ ಖುರೇಷಿ 8ನೇ ತರಗತಿಯಲ್ಲಿದ್ದಾಗಲೇ ನಾನು ಒಂದು ದಿನ ಜಿಲ್ಲಾಧಿಕಾರಿಯಾಗಿ ಸಮಾಜಕ್ಕಾಗಿ ಕೆಲಸ ಮಾಡಬೇಕೆಂದು ಕನಸು ಕಂಡಿದ್ದರು. ಹೀಗಾಗಿ ಯುಪಿಎಸ್ಸಿ ಬರೆಯಲು ನಿರ್ಧರಿಸಿದ ಅವರು 2021ರಲ್ಲಿ ಪರೀಕ್ಷೆಗಾಗಿ ಸಿದ್ಧತೆ ಆರಂಭಿಸಿದರು.
ಆರಂಭದಲ್ಲಿ ಫರ್ಖಂಡಾ ಖುರೇಷಿ ಅವರಿಗೆ ಹಿನ್ನಡೆಯುಂಟಾಯಿತು. ಆದರೂ ಅವರು ಸೋಲೊಪ್ಪಿಕೊಳ್ಳದೇ ಸತತವಾಗಿ ಪ್ರಯತ್ನ ಮಾಡಿದರು. ಅವರ ಪ್ರಯತ್ನದ ಫಲವಾಗಿ 2024ರಲ್ಲಿ ನಾಲ್ಕನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು 67ನೇ ರ್ಯಾಂಕ್ ಪಡೆಯುವಲ್ಲಿ ಯಶಸ್ವಿಯಾದರು.
ಸತತ ಪ್ರಯತ್ನದ ಬಳಿಕ ತಮ್ಮ ಕನಸನ್ನು ನನಸಾಗಿಸಿಕೊಂಡ ಫರ್ಖಂಡಾ ಖುರೇಷಿ ಅವರು, ಶೀಘ್ರದಲ್ಲೇ ಡೆಹ್ರಾಡೂನ್ನ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ನಲ್ಲಿ ತರಬೇತಿ ಆರಂಭಿಸಲಿದ್ದಾರೆ.