ಬೆಂಗಳೂರು, ಮಾ. 02 (DaijiworldNews/AA): ಮಧ್ಯಪ್ರಾಚ್ಯ ರಾಷ್ಟ್ರಗಳ ಕೆಲವು ಭಾಗಗಳಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ರಾಜ್ಯ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ. ವಿದೇಶದಲ್ಲಿರುವ ಪ್ರತಿಯೊಬ್ಬ ಕನ್ನಡಿಗರ ಸುರಕ್ಷತೆ ಮತ್ತು ಯೋಗಕ್ಷೇಮ ಹೆಚ್ಚಿನ ಆದ್ಯತೆಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

"ಈವರೆಗಿನ ಮಾಹಿತಿ ಪ್ರಕಾರ, ವಿಮಾನಗಳ ಹಾರಾಟ ಸ್ಥಗಿತಗೊಂಡಿರುವುದರಿAದ ಸುಮಾರು ನೂರು ಕನ್ನಡಿಗರು ಪ್ರಸ್ತುತ ಯುಎಇ ಹಾಗೂ 9 ಮಂದಿ ಬಹ್ರೇನ್ನಲ್ಲಿ ಸಿಲುಕಿಕೊಂಡಿದ್ದಾರೆ. ರಾಜ್ಯ ಸರ್ಕಾರ, ವಿದೇಶಾಂಗ ಸಚಿವಾಲಯ, ನಾಗರಿಕ ವಿಮಾನಯಾನ ಸಚಿವಾಲಯ, ಭಾರತೀಯ ರಾಯಭಾರ ಕಚೇರಿಗಳು ಮತ್ತು ದೂತವಾಸ ಕಚೇರಿಗಳೊಂದಿಗೆ ನಿರಂತರ ಸಮನ್ವಯದಲ್ಲಿದೆ" ಎಂದು ಹೇಳಿದ್ದಾರೆ.
ಸಂಕಷ್ಟಕ್ಕೆ ಸಿಲುಕಿದವರಲ್ಲಿ ಬಳ್ಳಾರಿಯ 32, ಬೆಂಗಳೂರಿನ 25, ದಾವಣಗೆರೆಯ 9, ಕೊಡಗು, ವಿಜಯಪುರ, ಹಾಸನ ತಲಾ ನಾಲ್ವರು, ಶಿವಮೊಗ್ಗ, ಉಡುಪಿ, ರಾಯಚೂರು, ದಕ್ಷಿಣ ಕನ್ನಡ ಜಿಲ್ಲೆಯ ತಲಾ ಮೂವರು ಸೇರಿದಂತೆ ಒಟ್ಟು 109 ಮಂದಿ ಸೇರಿದ್ದಾರೆ.