ಮುಂಬೈ, ಫೆ. 05 (DaijiworldNews/TA): ಮುಂಬೈಯಲ್ಲಿನ ವಸತಿ ಕಟ್ಟಡವೊಂದರ ಲಿಫ್ಟ್ ಒಳಗೆ ಹೈಡ್ರೋಜನ್ ತುಂಬಿದ ಬಲೂನ್ಗಳು ಸ್ಫೋಟಗೊಂಡಿರುವ ಭಯಾನಕ ಘಟನೆ ಸಿಸಿ ಕ್ಯಾಮರಾ ದೃಶ್ಯದಲ್ಲಿ ದಾಖಲಾಗಿದ್ದು, ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ, ಬಲೂನ್ಗಳಿಂದ ತುಂಬಿದ ಪ್ಲಾಸ್ಟಿಕ್ ಚೀಲವನ್ನು ಹೊತ್ತುಕೊಂಡು ಒಬ್ಬ ವ್ಯಕ್ತಿ ಲಿಫ್ಟ್ ಒಳಗೆ ಪ್ರವೇಶಿಸುತ್ತಿರುವುದು ಕಾಣುತ್ತದೆ. ಅವರೊಂದಿಗೆ ಮತ್ತೊಬ್ಬ ವ್ಯಕ್ತಿ ಟ್ರಾಲಿ ಬ್ಯಾಗ್ ಹಿಡಿದು ಲಿಫ್ಟ್ಗೆ ಬರುತ್ತಾರೆ. ಲಿಫ್ಟ್ ಬಾಗಿಲು ಮುಚ್ಚಿದ ತಕ್ಷಣವೇ ಹೈಡ್ರೋಜನ್ ತುಂಬಿದ ಬಲೂನ್ಗಳು ಏಕಾಏಕಿ ಸ್ಫೋಟಗೊಂಡಿವೆ.
ಸ್ಫೋಟದ ಪರಿಣಾಮ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಲಿಫ್ಟ್ ಒಳಗೆ ಹರಡಿದ್ದು, ಕೆಲಕಾಲ ಭಯಾನಕ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಲಿಫ್ಟ್ನಲ್ಲಿದ್ದ ಎಲ್ಲರೂ ಸಮಯಕ್ಕೆ ಸರಿಯಾಗಿ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹೆಚ್ಚಿನ ಅಪಾಯ ಸಂಭವಿಸಿಲ್ಲ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ.