ರಾಜಸ್ಥಾನ, ಫೆ. 05 (DaijiworldNews/AK): ರಾಜಸ್ಥಾನದ ಮೋನಿಕಾ ಯಾದವ್ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ವಯಸ್ಸು ಎಂದಿಗೂ ಅಡ್ಡಿಯಲ್ಲ ಎಂದು ಸಾಬೀತುಪಡಿಸಿದ್ದಾರೆ. ತನ್ನ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪಾಸ್ ಮಾಡಿ 22ನೇ ವಯಸ್ಸಿನಲ್ಲಿ ಐಎಎಸ್ ಅಧಿಕಾರಿಯಾಗುವ ಮೂಲಕ ಅವರು ತಮ್ಮ ಕುಟುಂಬಕ್ಕೆ ಕೀರ್ತಿ ತಂದರು. ಇದು ಮಾತ್ರವಲ್ಲದೆ ಲಕ್ಷಾಂತರ ಯುವಕರಿಗೆ ಸ್ಫೂರ್ತಿ ನೀಡಿದರು.

ಮೋನಿಕಾ ಯಾದವ್ ರಾಜಸ್ಥಾನದ ಸಿಕಾರ್ ಜಿಲ್ಲೆಯ ಲಿಸಾದಿಯಾ ಗ್ರಾಮದವರು. ಹಿರಿಯ ಆರ್ಎಎಸ್ (ರಾಜಸ್ಥಾನ ಆಡಳಿತ ಸೇವೆ) ಅಧಿಕಾರಿ ಹರ್ಫೂಲ್ ಸಿಂಗ್ ಯಾದವ್ ಮತ್ತು ಗೃಹಿಣಿ ತಾಯಿ ಸುನೀತಾ ಯಾದವ್ ದಂಪತಿಗೆ ಜನಿಸಿದ ಮೋನಿಕಾ, ಮೂವರಲ್ಲಿ ಹಿರಿಯ ಮಗಳು. ಬಾಲ್ಯದಿಂದಲೂ ತನ್ನ ಅಧ್ಯಯನದಲ್ಲಿ ಒಂದು ಹೆಜ್ಜೆ ಮುಂದೆ ಇದ್ದರು. ನಾಗರಿಕ ಸೇವೆಯಲ್ಲಿನ ಅವರ ತಂದೆಯ ಆಸಕ್ತಿಯಿಂದಲೇ ಸ್ಫೂರ್ತಿ ಪಡೆದರು. 2017ರಲ್ಲಿ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ತೇರ್ಗಡೆಯಾಗಿ, 403ನೇ ರ್ಯಾಂಕ್ ಗಳಿಸಿದರು.
ಆಗ ಅವರಿಗೆ ಕೇವಲ 22 ವರ್ಷ. ಇದಲ್ಲದೆ ರಾಜಸ್ಥಾನ ನಾಗರಿಕ ಸೇವೆಗಳಲ್ಲಿ 93ನೇ ರ್ಯಾಂಕ್, ಎನ್ಇಟಿ, ಜೆಆರ್ಎಫ್, ಸಿಎ ಕಠಿಣ ಪರೀಕ್ಷೆಗಳಲ್ಲೂ ಉತ್ತೀರ್ಣರಾದರು. ಲಕ್ನೋದ ಭಾರತೀಯ ರೈಲ್ವೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ 78 ವಾರಗಳ ತರಬೇತಿಯಲ್ಲಿ ಅತ್ಯುತ್ತಮ ಪ್ರದರ್ಶನ ಪ್ರಶಸ್ತಿ ಪಡೆದರು. ಬಲೋತ್ರಾ ಡಿಎಂ ಮತ್ತು ರಾಜಸ್ಥಾನ ಕೇಡರ್ ಐಎಎಸ್ ಅಧಿಕಾರಿಯಾದ ಸುಶೀಲ್ ಕುಮಾರ್ ಅವರು 2017ರ ಬ್ಯಾಚ್ಗೆ ಸೇರಿದವರಾಗಿದ್ದು, ಮೋನಿಕಾ ಅವರು ಮದುವೆ ಆದರು.
ಇಬ್ಬರೂ ರಾಜಸ್ಥಾನ ಕೇಡರ್ನವರಾಗಿದ್ದು, ನಾಗರಿಕ ಸೇವಾ ತರಬೇತಿಯ ಸಮಯದಲ್ಲಿ ಭೇಟಿಯಾದರು ಎನ್ನಲಾಗಿದೆ. 22ನೇ ವಯಸ್ಸಿನಲ್ಲಿ ಐಎಎಸ್ ಅಧಿಕಾರಿಯಾದ ಮೋನಿಕಾ, ಯುವಜನರಿಗೆ, ವಿಶೇಷವಾಗಿ ಹುಡುಗಿಯರಿಗೆ ಮಾದರಿಯಾಗಿದ್ದಾರೆ. ಅವರ ಉತ್ಸಾಹ, ಸಮಾಜ ಸೇವೆ, ಅವರ ಕಥೆ ಯುಪಿಎಸ್ಸಿ ಆಕಾಂಕ್ಷಿಗಳಿಗೆ ಸ್ಫೂರ್ತಿಯಾಗಿದೆ. ಕಠಿಣ ಪರಿಶ್ರಮ ಎಲ್ಲವನ್ನೂ ಸಾಧ್ಯವಾಗಿಸುತ್ತದೆ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ.