ಬೆಂಗಳೂರು, ಫೆ. 04 (DaijiworldNews/AK): ಇಂದು ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್ಡಿ ದೇವೇಗೌಡರು ಕರ್ನಾಟಕದ ಪರ ಧ್ವನಿ ಎತ್ತಿದರು. ರಾಜ್ಯದ ನೀರಾವರಿ ಬಗ್ಗೆ ಪ್ರಸ್ತಾಪಿಸಿದ ಅವರು, ಕರ್ನಾಟಕವನ್ನು ರಕ್ಷಿಸಿ. ನನ್ನ ರಾಜ್ಯದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ, ಅವರ ಹಿತ ಕಾಯಿರಿ. ಈ ವೃದ್ಧನ ಮನವಿಗೆ ಮಾನವೀಯತೆಯಿಂದ ಸ್ಪಂದಿಸಿ ಎಂದು ಹೇಳಿದರು. ಹೆಚ್ಡಿ ದೇವೇಗೌಡರ ಈ ಮಾತಿಗೆ ಇಡೀ ಸದನವೇ ಒಂದು ಕ್ಷಣ ಮೌನವಾಯಿತು.

ರಾಜ್ಯಸಭೆಯಲ್ಲಿ ಬುಧವಾರ ನಡೆದ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಹೆಚ್ಡಿ ದೇವೇಗೌಡರು, ಕರ್ನಾಟಕದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ರಾಜ್ಯದ ಅನೇಕ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಆ ಎಲ್ಲಾ ಯೋಜನೆಗಳಿಗೆ ಅನುಮೋದನೆ ನೀಡುವ ಮೂಲಕ ಕರ್ನಾಟಕ ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಕೇಂದ್ರ ಸರಕಾರವನ್ನು ಮನವಿ ಮಾಡಿಕೊಂಡರು.
‘ನನ್ನ ರಾಜ್ಯಸಭಾ ಅವಧಿ ಇನ್ನೊಂದು ತಿಂಗಳಲ್ಲಿ ಮುಗಿಯಲಿದೆ. ನನ್ನ ರಾಜ್ಯದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಅವರ ಹಿತಕಾಯಿರಿ. ನಾವೆಲ್ಲರೂ ಮನುಷ್ಯರು, ಮಳೆ ಬಿದ್ದರೆ ನೀರು, ಇಲ್ಲವಾದರೆ ಇಲ್ಲ. ಈ ಸದನದ ಎಲ್ಲಾ ಸದಸ್ಯರು ಕರ್ನಾಟಕದ ರಕ್ಷಣೆ ಮಾಡಬೇಕು ಎಂಬುದಾಗಿ ನಾನು ಕೈ ಮುಗಿದು ಬೇಡುತ್ತೇನೆ’ ಎಂದರು.
‘ಕರ್ನಾಟಕ ನಿರಂತರವಾಗಿ ನೆರೆ ರಾಜ್ಯಗಳ ಜತೆ ನೀರಾವರಿ ಹಕ್ಕಿಗಾಗಿ ಹೋರಾಟ ನಡೆಸುತ್ತಿದೆ. ನಾನು ಕೂಡ ನೀರಿಗಾಗಿ 65 ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದೇನೆ. ಈ ಸದನದಲ್ಲಿ ನಾನು ನ್ಯಾಯಮಂಡಳಿಗಳು ನೀಡಿರುವ ತೀರ್ಪುಗಳ ಬಗ್ಗೆ ಚರ್ಚಿಸಲು ಬಯಸುವುದಿಲ್ಲ. ಕರ್ನಾಟಕ ರಾಜ್ಯಕ್ಕೆ ನೀರಿನದೇ ಬಹುದೊಡ್ಡ ಬಿಕ್ಕಟ್ಟಾಗಿದೆ. ಒಂದೆಡೆ ತಮಿಳುನಾಡು, ಮತ್ತೊಂದೆಡೆಯಲ್ಲಿ ಆಂಧ್ರ ಪ್ರದೇಶ, ಇನ್ನೊಂದು ಕಡೆಯಲ್ಲಿ ಗೋವಾದಿಂದ ತೊಂದರೆ ಎದುರಿಸುತ್ತಿದೆ’ ಎಂದಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಈ ಬಿಕ್ಕಟ್ಟಿಗೆ ಪರಿಹಾರ ನೀಡಬೇಕು. ನಾನು ನಿಮ್ಮ (ಎನ್ಡಿಎ) ಜತೆಯಲ್ಲಿಯೇ ಇರುತ್ತೇನೆ. ನನ್ನ ಮಗ ನಿಮ್ಮ ಸಂಪುಟದಲ್ಲಿ ಇದ್ದಾನೆ. ನಾವು ಮುಂದೆಯೂ ನಿಮ್ಮ ಜತೆಗೆ ಇರುತ್ತೇವೆ ಹಾಗೂ ಮೈತ್ರಿಕೂಟ ಬದಲಾವಣೆ ಮಾಡುವ ಯಾವ ಪ್ರಶ್ನೆಯೇ ಇಲ್ಲ. ರಾಜ್ಯದ ಜನರಿಗೆ ನ್ಯಾಯ ಒದಗಿಸಿ ಎಂಬುದಷ್ಟೇ ನನ್ನ ಏಕೈಕ ಮನವಿ’ ಎಂದು ಹೇಳಿದ್ದಾರೆ.
ಇದೇ ವೇಳೆ ಯುರೋಪಿಯನ್ ಒಕ್ಕೂಟ ಹಾಗೂ ಅಮೆರಿಕ ಜತೆ ಯಶಸ್ವಿಯಾಗಿ ವ್ಯಾಪಾರ ಒಪ್ಪಂದ ಮಾಡಿಕೊಂಡ ಭಾರತದ ರಾಜತಾಂತ್ರಿಕ ಜಾಣ್ಮೆಯನ್ನು ಕೊಂಡಾಡಿದ ಹೆಚ್ಡಿ ದೇವೇಗೌಡರು, ಇದಕ್ಕೆ ಕಾರಣೀಭೂತರಾದ ಪ್ರಧಾನಿ ನರೇಂದ್ರ ಮೋದಿಯನ್ನ ಶ್ಲಾಘಿಸಿದರು. ಈ ಬಗ್ಗೆ ತಾವು ಪತ್ರ ಬರೆದಿರುವುದನ್ನು ಉಲ್ಲೇಖಿಸಿದರು.