ಶಿವಮೊಗ್ಗ, ಫೆ. 02 (DaijiworldNews/TA): ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ತಮ್ಮ 9ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಆತ್ಮನಿರ್ಭರ, ವಿಕಸಿತ ಭಾರತ ಮತ್ತು ಸ್ವಾವಲಂಬನೆಯನ್ನು ಗುರಿಯಾಗಿ ಇಟ್ಟುಕೊಂಡು ಅತ್ಯುತ್ತಮ ಬಜೆಟ್ ಮಂಡಿಸಿದ್ದಾಗಿ ದೇಶಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ ಎಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಮಾಧ್ಯಮಗಳ ಜೊತೆ ಇಂದು ಅವರು ಮಾತನಾಡಿದರು. ಅಸ್ಪಷ್ಟತೆಯಿಂದ ಸ್ಪಷ್ಟತೆ ಕಡೆಗೆ, ಆಡಂಬರದಿಂದ ಸುಧಾರಣೆಯತ್ತ, ಜನಪ್ರಿಯತೆಗಿಂತ ಜನಹಿತ ಮುಖ್ಯ ಎಂಬುದನ್ನು ನಿನ್ನೆ ಮತ್ತೊಮ್ಮೆ ಅವರು ಋಜುವಾತು ಮಾಡಿದ್ದಾರೆ ಎಂದು ವಿಶ್ಲೇಷಿಸಿದರು. ಜಾಗತಿಕ ಪರಿಸ್ಥಿತಿಯನ್ನೂ ನಾವು, ನೀವೆಲ್ಲರೂ ಗಮನಿಸಬೇಕಿದೆ. ಅಮೆರಿಕ ಅಧ್ಯಕ್ಷ ಟ್ರಂಪ್, ಭಾರತದ ವಿರುದ್ಧ ಸಾರಿರುವ ಸುಂಕ- ವಾಣಿಜ್ಯ ಸಮರಕ್ಕೆ ಎದೆಗುಂದದೆ 2047ಕ್ಕೆ ವಿಕಸಿತ ಭಾರತ ಆಗಬೇಕೆಂಬ ಪ್ರಧಾನಮಂತ್ರಿಯವರ ಗುರಿಯತ್ತ ಸಾಗುವ ನಿಟ್ಟಿನಲ್ಲಿ ಅನೇಕ ಸುಧಾರಣೆಗಳನ್ನು ಮಾನ್ಯ ಹಣಕಾಸು ಸಚಿವರು ನೀಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಕೈಗಾರಿಕೆ, ಪ್ರವಾಸೋದ್ಯಮ, ಸೆಮಿ ಕಂಡಕ್ಟರ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಕೃಷಿ ಕ್ಷೇತ್ರ ಸೇರಿ ಎಲ್ಲ ಕ್ಷೇತ್ರಗಳಿಗೆ ಆದ್ಯತೆ ನೀಡಿದ್ದಾರೆ. ಆರ್ಥಿಕ ಶಿಸ್ತು ಕಾಪಾಡುವ ಮಹತ್ವದ ಜವಾಬ್ದಾರಿ ಹಣಕಾಸು ಸಚಿವರ ಮೇಲೆ ಇತ್ತು. ಆ ಪ್ರಥಮ ಆದ್ಯತೆ ಇಟ್ಟುಕೊಂಡು, ಹಣಕಾಸು ಕೊರತೆ ಶೇ 4.4ಕ್ಕೆ ತಂದಿರುವುದು ಇದಕ್ಕೆ ಸಾಕ್ಷಿ ಎಂದು ನುಡಿದರು.
ರಾಜ್ಯದ ತೆರಿಗೆ ಪಾಲು ಶೇ 3.65ರಿಂದ 4.13 ಶೇಕಡಾಕ್ಕೆ ಹೆಚ್ಚಳ
ಕರ್ನಾಟಕದಲ್ಲಿ ದೊಡ್ಡ ಪ್ರಮಾಣದ ತೆಂಗು ಬೆಳೆಗಾರರಿದ್ದಾರೆ. ಅದೇರೀತಿ ಗೋಡಂಬಿ, ಕೊಕ್ಕೊ, ಮೀನು ಸಾಕಣೆ ಮಾಡುವವರು, ಶ್ರೀಗಂಧ ಬೆಳೆಗಾರರಿಗೆ ಈ ಬಜೆಟ್ ಅನುಕೂಲ ಕಲ್ಪಿಸಿದೆ. ಇದು ಅತ್ಯಂತ ಸ್ವಾಗತಾರ್ಹ. ಕಳೆದ 2.5 ವರ್ಷದಲ್ಲಿ ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರ ಬಂದ ಬಳಿಕ ಕೇಂದ್ರ ಸರಕಾರವನ್ನು ಪದೇಪದೇ ಟೀಕಿಸುವುದನ್ನು ನೋಡಿದ್ದೇವೆ. 16ನೇ ಹಣಕಾಸು ಆಯೋಗವು ಜಿಡಿಪಿ ಕೊಡುಗೆಗೆ ಶೇ. 10 ರಷ್ಟು ಸುಧಾರಣೆ ಮೊತ್ತ ಪ್ರಕಟಿಸಿದೆ.
ಇದರಿಂದ ನಮ್ಮ ರಾಜ್ಯದ ತೆರಿಗೆ ಪಾಲು ಶೇ 3.65ರಿಂದ 4.13 ಶೇಕಡಾಕ್ಕೆ ಹೆಚ್ಚಾಗಿದೆ. ಪ್ರತಿ ವರ್ಷ ಕರ್ನಾಟಕಕ್ಕೆ 7,387 ಕೋಟಿ ರೂ. ಹೆಚ್ಚುವರಿಯಾಗಿ ಲಭಿಸಲಿದೆ. 5 ವರ್ಷಕ್ಕೆ ಹೆಚ್ಚುವರಿಯಾಗಿ 63,050 ಕೋಟಿ ರೂ. ದೊರಕಲಿದೆ ಎಂದು ತಿಳಿಸಿದರು.