ಶ್ರೀನಗರ, ಫೆ. 02 (DaijiworldNews/TA): ಕಳೆದ ಕೆಲವು ದಿನಗಳಿಂದ ದೇಶದ ವಿವಿಧ ಭಾಗಗಳಲ್ಲಿ ಭೂಕಂಪನದ ಅನುಭವವಾಗುತ್ತಿದ್ದು, ಭೀತಿಯ ವಾತಾವರಣ ನಿರ್ಮಾಣವಾಗಿದೆ. ಇದರ ಮುಂದುವರಿದ ಭಾಗವಾಗಿ, ಸೋಮವಾರ ಬೆಳಗಿನ ಜಾವ ಕಾಶ್ಮೀರ ಕಣಿವೆಯಲ್ಲಿ 4.8 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಮಿ ಕಂಪಿಸಿದ ಅನುಭವದಿಂದ ಬಾರಾಮುಲ್ಲಾ ಸೇರಿದಂತೆ ಹಲವು ಪ್ರದೇಶಗಳ ಜನರು ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ NCS ನೀಡಿದ ಮಾಹಿತಿಯಂತೆ, ಫೆಬ್ರವರಿ 2ರಂದು ಬೆಳಗ್ಗೆ 5.35ಕ್ಕೆ ಈ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.8 ತೀವ್ರತೆ ದಾಖಲಾಗಿದ್ದು, ಇಲ್ಲಿಯವರೆಗೆ ಯಾವುದೇ ಸಾವುನೋವು ಅಥವಾ ಆಸ್ತಿ ಹಾನಿ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ ತೀವ್ರ ಚಳಿ ಆವರಿಸಿದ್ದು, ಹಲವು ಪ್ರದೇಶಗಳಲ್ಲಿ ಭಾರೀ ಹಿಮಪಾತವೂ ನಡೆಯುತ್ತಿದೆ. ಚಳಿ ನಡುವೆಯೇ ಜನರು ಮನೆ ಬಿಟ್ಟು ಹೊರಬರಬೇಕಾದ ಪರಿಸ್ಥಿತಿ ಉಂಟಾಗಿ ಆತಂಕ ಹೆಚ್ಚಾಯಿತು.
ಸೋಮವಾರ ಮುಂಜಾನೆ ನೆರೆಯ ಬಾಂಗ್ಲಾದೇಶದಲ್ಲಿಯೂ ಭೂಕಂಪನದ ಅನುಭವ ವರದಿಯಾಗಿದೆ. ಭಾನುವಾರ ಬೆಳಗಿನ ಜಾವ ಸುಮಾರು 4 ಗಂಟೆಗೆ ಸಂಭವಿಸಿದ ಈ ಭೂಕಂಪವು 20 ಕಿಲೋಮೀಟರ್ ಆಳದಲ್ಲಿ ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲಿ 3.0 ತೀವ್ರತೆ ದಾಖಲಾಗಿದೆ ಎಂದು NCS ತಿಳಿಸಿದೆ. ಇದಲ್ಲದೆ, ಫಿಲಿಪೈನ್ಸ್ನ ಮಿಂಡಾನಾವೊ ದ್ವೀಪದಲ್ಲಿ ಬುಧವಾರ 6.0 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿರುವುದಾಗಿ ವರದಿಯಾಗಿದೆ. ಮತ್ತೊಂದೆಡೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿಯೂ ಸೋಮವಾರ ಬೆಳಗಿನ ಜಾವ 3.31ಕ್ಕೆ 4.6 ತೀವ್ರತೆಯ ಭೂಕಂಪ ಸಂಭವಿಸಿದೆ.
ಭೂಮಿಯ ಹೊರಪದರವನ್ನು ರೂಪಿಸುವ ಏಳು ಪ್ರಮುಖ ಟೆಕ್ಟೋನಿಕ್ ಪ್ಲೇಟ್ಗಳ ಚಲನೆಯಿಂದ ಭೂಕಂಪಗಳು ಸಂಭವಿಸುತ್ತವೆ. ಈ ಪ್ಲೇಟ್ಗಳು ನಿರಂತರವಾಗಿ ಚಲಿಸುತ್ತಿರುವುದರಿಂದ ಭೂಕಂಪನಗಳು ವಿವಿಧ ವಲಯಗಳಲ್ಲಿ ಉಂಟಾಗುತ್ತವೆ ಎಂದು ತಜ್ಞರು ವಿವರಿಸಿದ್ದಾರೆ. ಸದ್ಯಕ್ಕೆ ಎಲ್ಲೆಡೆ ಹಾನಿಯ ವರದಿಗಳು ಇಲ್ಲದಿದ್ದರೂ, ನಿರಂತರವಾಗಿ ಸಂಭವಿಸುತ್ತಿರುವ ಭೂಕಂಪಗಳು ಜನರಲ್ಲಿ ಆತಂಕವನ್ನು ಹೆಚ್ಚಿಸಿವೆ.