National
ಕೇಂದ್ರ ಬಜೆಟ್ 2026ರ ಪ್ರಮುಖ ಅಂಶಗಳು
- Sun, Feb 01 2026 02:37:24 PM
-
ನವದೆಹಲಿ, ಫೆ. 01 (DaijiworldNews/TA): ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಬೆಳಿಗ್ಗೆ 11 ಗಂಟೆಗೆ 2026–27ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಿದರು. ಭಾನುವಾರ ದಿನವೇ ಬಜೆಟ್ ಮಂಡನೆಯಾಗಿದ್ದು, ಇದು ನಿರ್ಮಲಾ ಸೀತಾರಾಮನ್ ಅವರ 9ನೇ ಸತತ ಬಜೆಟ್ ಆಗಿದ್ದು, ‘ವಿಕಸಿತ ಭಾರತ’ ಗುರಿಯೊಂದಿಗೆ ಆರ್ಥಿಕ ಬೆಳವಣಿಗೆ, ಸಾಮಾಜಿಕ ಸಮಾವೇಶ ಮತ್ತು ತಂತ್ರಜ್ಞಾನಾಧಾರಿತ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.

ಬಜೆಟ್ ಮಂಡನೆಯ ವೇಳೆ 3 ಪ್ರಮುಖ ಕರ್ತವ್ಯಗಳಿಗೆ ಆದ್ಯತೆ ನೀಡಲಾಗಿದೆ ಎಂದು ವಿತ್ತ ಸಚಿವೆ ಸ್ಪಷ್ಟಪಡಿಸಿದರು. ಉತ್ಪಾದಕತೆ ಹೆಚ್ಚಿಸುವ ಮೂಲಕ ಆರ್ಥಿಕತೆಗೆ ಶಕ್ತಿ ತುಂಬುವುದು, ಜನರ ನಿರೀಕ್ಷೆಗಳನ್ನು ಪೂರೈಸುವ ಮೂಲಕ ಅವರನ್ನು ದೇಶದ ಬೆಳವಣಿಗೆಯ ಭಾಗವಾಗಿಸುವುದು ಹಾಗೂ ‘ಸಬ್ ಕಾ ಸಾಥ್ – ಸಬ್ ಕಾ ವಿಕಾಸ್’ ತತ್ವದಡಿ ಸಮಗ್ರ ಅಭಿವೃದ್ಧಿ ಸಾಧಿಸುವುದು ಈ ಮೂರು ಕರ್ತವ್ಯಗಳಾಗಿವೆ ಎಂದು ಅವರು ಹೇಳಿದರು. ವಿಶೇಷ ಮೇಘ ಪೂರ್ಣಿಮೆ ಹಾಗೂ ರವಿದಾಸ್ ಜಯಂತಿಯ ಶುಭಾಶಯಗಳೊಂದಿಗೆ ಅವರು ಬಜೆಟ್ ಭಾಷಣ ಆರಂಭಿಸಿದರು.
ತೆರಿಗೆ ಮತ್ತು ಸುಂಕ : ಬಜೆಟ್ನಲ್ಲಿ ತೆರಿಗೆ ಮತ್ತು ಸುಂಕಗಳಲ್ಲಿ ಮಹತ್ವದ ಬದಲಾವಣೆಗಳನ್ನು ಘೋಷಿಸಲಾಗಿದೆ. ಸಿಗರೇಟ್ ಮತ್ತು ಮದ್ಯದ ಮೇಲಿನ ಸುಂಕ ಹೆಚ್ಚಳವಾಗಿದ್ದು, ಬ್ಯಾಟರಿ, ಮೈಕ್ರೋವೇವ್ ಓವನ್, ಅಣುವಿದ್ಯುತ್ ಸ್ಥಾವರಗಳ ಉಪಕರಣಗಳು ಹಾಗೂ ವಿಮಾನ ಬಿಡಿಭಾಗಗಳ ಮೇಲಿನ ಆಮದು ಸುಂಕ ಇಳಿಸಲಾಗಿದೆ. ಹದಿನೇಳು ಕ್ಯಾನ್ಸರ್ ಔಷಧಗಳು ಮತ್ತು ಏಳು ಅಪರೂಪದ ಕಾಯಿಲೆಗಳ ಔಷಧಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಆರೋಗ್ಯ ಮತ್ತು ಶಿಕ್ಷಣ ಸಂಬಂಧಿತ ಟಿಸಿಎಸ್ ದರವನ್ನು ಶೇ.5ರಿಂದ ಶೇ.2ಕ್ಕೆ ಇಳಿಸಲಾಗಿದ್ದು, ವಿದೇಶ ಯಾತ್ರೆಗಳ ಟಿಸಿಎಸ್ ಕೂಡ ಕಡಿತಗೊಳಿಸಲಾಗಿದೆ. ಅನಿವಾಸಿ ಭಾರತೀಯರ ಸ್ಥಿರಾಸ್ತಿಯ ಮೇಲಿನ ಟಿಡಿಎಸ್ ಕಡಿತಕ್ಕೂ ಬಜೆಟ್ನಲ್ಲಿ ಅವಕಾಶ ಕಲ್ಪಿಸಲಾಗಿದೆ.
ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆಗಳನ್ನು ಘೋಷಿಸಲಾಗಿದ್ದು, ನಿಯಮಗಳ ಸರಳೀಕರಣ, ಫಾರ್ಮ್ಗಳ ಸುಲಭೀಕರಣ ಮತ್ತು ತೆರಿಗೆ ಪಾವತಿಗೆ ಹೆಚ್ಚುವರಿ ಸಮಯಾವಕಾಶ ನೀಡಲಾಗಿದೆ. ಸಣ್ಣ ತೆರಿಗೆದಾರರಿಗೆ ಹೊಸ ವ್ಯವಸ್ಥೆ ಪರಿಚಯಿಸಲಾಗಿದ್ದು, ಅಪಘಾತ ವಿಮೆ ಪರಿಹಾರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ವಿದೇಶದಲ್ಲಿನ ಆಸ್ತಿ ಘೋಷಣೆಗೆ ಆರು ತಿಂಗಳ ಸಮಯಾವಕಾಶ ಕಲ್ಪಿಸಲಾಗಿದೆ. ಕಂಪನಿಗಳನ್ನು ಹೊಸ ತೆರಿಗೆ ಪದ್ಧತಿಗೆ ಸೇರಿಸಿಕೊಳ್ಳಲು ಉತ್ತೇಜನ ನೀಡಲಾಗಿದ್ದು, ಮ್ಯಾಟ್ ದರವನ್ನು ಶೇ.15ರಿಂದ ಶೇ.14ಕ್ಕೆ ಇಳಿಸಲಾಗಿದೆ.
ರಕ್ಷಣಾ ವಲಯ : ರಕ್ಷಣಾ ವಲಯದಲ್ಲಿ ಯುದ್ಧ ವಿಮಾನಗಳ ತಯಾರಿಕೆ ಮತ್ತು ನಿರ್ವಹಣೆಗೆ ಅಗತ್ಯವಿರುವ ಬಿಡಿಭಾಗಗಳ ಮೇಲೆ ತೆರಿಗೆ ವಿನಾಯಿತಿ ನೀಡಲಾಗಿದೆ. ಐಟಿ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಭಾರೀ ಪ್ರೋತ್ಸಾಹ ನೀಡಲಾಗಿದ್ದು, 300ರಿಂದ 2000 ಕೋಟಿ ರೂ. ಮೌಲ್ಯದ ಯೋಜನೆಗಳು ಘೋಷಣೆಯಾಗಿವೆ. ಭಾರತದಲ್ಲಿ ಹೂಡಿಕೆ ಮಾಡುವ ವಿದೇಶಿ ಕಂಪನಿಗಳಿಗೆ ಟ್ಯಾಕ್ಸ್ ಹಾಲಿಡೇ, ಡೇಟಾ ಸರ್ವೀಸ್ ಸೆಂಟರ್ಗಳಿಗೆ ತೆರಿಗೆ ವಿನಾಯಿತಿ ಹಾಗೂ ಅತಿಸಣ್ಣ ಕೈಗಾರಿಕೆಗಳಿಗೆ ಸುಲಭ ಸಾಲ ಸೌಲಭ್ಯ ನೀಡಲಾಗಿದೆ.
ಕೃಷಿ ವಲಯ : ಕೃಷಿ ವಲಯಕ್ಕೆ ಬಜೆಟ್ನಲ್ಲಿ ವಿಶೇಷ ಸ್ಥಾನ ನೀಡಲಾಗಿದ್ದು, ಗೋಡಂಬಿ, ತೆಂಗಿನಕಾಯಿ, ಕೋಕೋ ಸೇರಿದಂತೆ ಹೈ ವ್ಯಾಲ್ಯೂ ಬೆಳೆಗಳಿಗೆ ಭರ್ಜರಿ ಅನುದಾನ ಘೋಷಿಸಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಹೊಸ ತೆಂಗು ಸಸಿ ನೆಡುವ ಯೋಜನೆ ಕೈಗೊಳ್ಳಲಾಗಿದ್ದು, ರೈತರ ಆದಾಯ ದ್ವಿಗುಣಗೊಳಿಸುವ ಹಾಗೂ ಯುವಕರಿಗೆ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ. ಪಶುಪಾಲನೆ ಮತ್ತು ಮೀನುಗಾರಿಕೆ ವಲಯಕ್ಕೂ ಸಾಲ ಸೌಲಭ್ಯ ಹಾಗೂ ಡೈರಿಗಳ ವಿಸ್ತರಣೆಗೆ ಉತ್ತೇಜನ ನೀಡಲಾಗಿದೆ.
ಮಹಿಳಾ ಸಬಲೀಕರಣ : ಮಹಿಳಾ ಸಬಲೀಕರಣಕ್ಕೆ ‘ಶಿ-ಮಾರ್ಚ್’ ಯೋಜನೆ ಮೂಲಕ ಮಹಿಳಾ ಉದ್ಯಮಿಗಳಿಗೆ ವಿಶೇಷ ಪ್ರೋತ್ಸಾಹ ನೀಡಲಾಗಿದ್ದು, ಲಕ್ಪತಿ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ದಿನಸಿ ಅಂಗಡಿ ಆರಂಭಿಸುವ ಮಹಿಳೆಯರಿಗೆ ವಿಶೇಷ ಸಹಾಯಧನ ಘೋಷಿಸಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಎಲ್ಲಾ ರಾಜ್ಯಗಳಲ್ಲಿ ಯುನಿವರ್ಸಿಟಿ ಟೌನ್ಶಿಪ್ಗಳ ನಿರ್ಮಾಣ, ಎಲ್ಲಾ ಜಿಲ್ಲೆಗಳಲ್ಲಿ ಬಾಲಕಿಯರ ಹಾಸ್ಟೆಲ್ಗಳ ಸ್ಥಾಪನೆ ಮತ್ತು ಸ್ಕಿಲ್ ಸೆಂಟರ್ಗಳಿಗೆ ಕೇಂದ್ರದ ಸಹಕಾರ ಘೋಷಿಸಲಾಗಿದೆ.
ಆರೋಗ್ಯ ಕ್ಷೇತ್ರ : ಆರೋಗ್ಯ ಕ್ಷೇತ್ರದಲ್ಲಿ ಈಶಾನ್ಯ ಭಾರತದಲ್ಲಿ ಏಮ್ಸ್ ಆಸ್ಪತ್ರೆ, ಉತ್ತರ ಭಾರತಕ್ಕೆ ನಿಮ್ಹಾನ್ಸ್–2 ನಿರ್ಮಾಣ, ರಾಂಚಿಯಲ್ಲಿ ಮಾನಸಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಮನೋಆರೋಗ್ಯ ವಿಭಾಗ ಆರಂಭಿಸುವ ಘೋಷಣೆ ಮಾಡಲಾಗಿದೆ. ಆಯುರ್ವೇದ ಮತ್ತು ಆಯುಷ್ ಕ್ಷೇತ್ರಕ್ಕೂ ಹೆಚ್ಚಿನ ಮನ್ನಣೆ ನೀಡಲಾಗಿದ್ದು, ಸಂಶೋಧನಾ ಕೇಂದ್ರಗಳು ಮತ್ತು ಆಯುಷ್ ಫಾರ್ಮಸಿಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.
ಹೈಸ್ಪೀಡ್ ರೈಲು : ಸಾರಿಗೆ ಮತ್ತು ಮೂಲಸೌಕರ್ಯ ಕ್ಷೇತ್ರದಲ್ಲಿ ಏಳು ಹೈಸ್ಪೀಡ್ ರೈಲು ಕಾರಿಡಾರ್ಗಳ ನಿರ್ಮಾಣ, ಪ್ರಮುಖ ನಗರಗಳಿಗೆ ನಾಲ್ಕು ಸಾವಿರ ಎಲೆಕ್ಟ್ರಿಕ್ ಬಸ್ಗಳ ಒದಗಿಕೆ ಮತ್ತು ಮುಂದಿನ ಐದು ವರ್ಷಗಳಲ್ಲಿ ದೇಶಾದ್ಯಂತ 20 ಜಲಮಾರ್ಗಗಳ ಅಭಿವೃದ್ಧಿ ಘೋಷಿಸಲಾಗಿದೆ. ಪ್ರವಾಸೋದ್ಯಮಕ್ಕೆ ಗೈಡ್ಗಳಿಗಾಗಿ ಪೈಲಟ್ ಸ್ಕೀಮ್, ಟ್ರೆಕ್ಕಿಂಗ್ ಮಾರ್ಗಗಳ ಅಭಿವೃದ್ಧಿ ಮತ್ತು ಪರ್ವತ ರೈಲುಗಳಿಗೆ ಒತ್ತು ನೀಡಲಾಗಿದೆ.
ಕೈಗಾರಿಕಾ ವಲಯ : ಕೈಗಾರಿಕಾ ವಲಯದಲ್ಲಿ 10 ಸಾವಿರ ಕೋಟಿ ರೂ. ಮೀಸಲಿಟ್ಟ ಕೈಗಾರಿಕಾ ಕ್ಲಸ್ಟರ್ ಅಭಿವೃದ್ಧಿ, ಬಯೋ ಫಾರ್ಮ್ ಮತ್ತು ರೇರ್ ಅರ್ಥ್ ಗಣಿಗಾರಿಕೆಗೆ ವಿಶೇಷ ಆದ್ಯತೆ, ಸೆಮಿಕಂಡಕ್ಟರ್ ಯೋಜನೆಗೆ 40 ಸಾವಿರ ಕೋಟಿ ರೂ. ಅನುದಾನ ಘೋಷಿಸಲಾಗಿದೆ. ಖಾದಿ, ಗ್ರಾಮೋದ್ಯೋಗ ಮತ್ತು ಕರಕುಶಲ ಕ್ಷೇತ್ರಕ್ಕೂ ಹೊಸ ಉತ್ತೇಜನ ನೀಡಲಾಗಿದೆ.
ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ಜೆಡಿಎಸ್ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ, ಇದನ್ನು ‘ಸುಧಾರಣಾ ಎಕ್ಸ್ಪ್ರೆಸ್’ ಎಂದು ವರ್ಣಿಸಿದ್ದು, ವಿಕಸಿತ ಭಾರತದತ್ತ ದೇಶವನ್ನು ಕರೆದೊಯ್ಯುವ ದೂರದೃಷ್ಟಿಯ ಆಯವ್ಯಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಜೆಟ್ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಮುಖದಲ್ಲಿ ಮಂದಹಾಸ ಕಂಡುಬಂದಿದ್ದು, ಸರ್ಕಾರದ ಆತ್ಮವಿಶ್ವಾಸವನ್ನು ಇದು ಪ್ರತಿಬಿಂಬಿಸಿದೆ.
ಒಟ್ಟಾರೆ, 2026ರ ಕೇಂದ್ರ ಬಜೆಟ್ ಅನ್ನು ‘ಯುವಶಕ್ತಿ, ಉದ್ಯಮ, ತಂತ್ರಜ್ಞಾನ ಮತ್ತು ಸಮಾವೇಶಿತ ಅಭಿವೃದ್ಧಿಯ ಬಜೆಟ್’ ಎಂದು ಸರ್ಕಾರ ಬಣ್ಣಿಸಿದ್ದು, ದೇಶದ ವೇಗದ ಆರ್ಥಿಕ ಬೆಳವಣಿಗೆಗೆ ಇದು ಹೊಸ ದಿಕ್ಕು ನೀಡಲಿದೆ ಎಂಬ ನಿರೀಕ್ಷೆ ಮೂಡಿದೆ.