ನವದೆಹಲಿ, ಫೆ. 01 (DaijiworldNews/TA): ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಭಾರತದ 88ನೇ ಕೇಂದ್ರ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸುತ್ತಿದ್ದಾರೆ. ಇದು ಅವರ ಸತತ ಒಂಬತ್ತನೇ ಬಜೆಟ್ ಆಗಿದ್ದು, ಈ ಮೂಲಕ ಅವರು ಭಾರತೀಯ ರಾಜಕೀಯ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ್ದಾರೆ. ಪ್ರತೀ ಬಜೆಟ್ ಸಂದರ್ಭದಲ್ಲೂ ವಿಭಿನ್ನ ರಾಜ್ಯಗಳ ಸಾಂಪ್ರದಾಯಿಕ ಸೀರೆಗಳನ್ನು ಧರಿಸುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿರುವ ನಿರ್ಮಲಾ ಸೀತಾರಾಮನ್, ಈ ಬಾರಿ ತಮಿಳುನಾಡಿನ ಪ್ರಸಿದ್ಧ ಕಾಂಜೀವರಂ ರೇಷ್ಮೆ ಸೀರೆ ಧರಿಸಿ ಸಂಸತ್ತಿಗೆ ಆಗಮಿಸಿದ್ದಾರೆ.

2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ಬಳಿಕ, ಕೇಂದ್ರ ಬಜೆಟ್ನ ಸ್ವರೂಪ ಮತ್ತು ಸಂಪ್ರದಾಯಗಳಲ್ಲಿ ಹಲವು ಬದಲಾವಣೆಗಳು ಕಂಡುಬಂದಿವೆ. ಈ ಬದಲಾವಣೆಗಳಲ್ಲಿ ಕೆಲವು ರಚನಾತ್ಮಕವಾಗಿದ್ದರೆ, ಇನ್ನೂ ಕೆಲವು ಸಾಂಕೇತಿಕ ಅರ್ಥವನ್ನು ಹೊತ್ತು ತಂದಿವೆ. ಬಜೆಟ್ ಮಂಡನೆಯ ದಿನಾಂಕದಿಂದ ಹಿಡಿದು, ಬಜೆಟ್ ಪುಸ್ತಕದ ರೂಪವರೆಗೆ ಹಲವು ಪರಿವರ್ತನೆಗಳು ನಡೆದಿವೆ.
2017ರ ತನಕ ಕೇಂದ್ರ ಬಜೆಟ್ ಅನ್ನು ಫೆಬ್ರವರಿ ತಿಂಗಳ ಕೊನೆಯ ಕಾರ್ಯದಿನದಂದು ಮಂಡಿಸುವ ಪದ್ಧತಿ ಇತ್ತು. ಆದರೆ, ಹಣಕಾಸು ವರ್ಷದ ಆರಂಭಕ್ಕೂ ಮುನ್ನವೇ ಬಜೆಟ್ಗೆ ಸಂಸತ್ತಿನ ಅನುಮೋದನೆ ಪಡೆದು ಯೋಜನೆಗಳನ್ನು ಜಾರಿಗೆ ತರಲು ಅಗತ್ಯ ಸಮಯ ಸಿಗುತ್ತಿರಲಿಲ್ಲ. ಈ ಹಿನ್ನೆಲೆ 2017ರಲ್ಲಿ ಬಜೆಟ್ ಮಂಡನೆಯ ದಿನಾಂಕವನ್ನು ಫೆಬ್ರವರಿ 1ಕ್ಕೆ ಮುಂದೂಡಲಾಯಿತು. ಈ ಬದಲಾವಣೆಯಿಂದ ಹೊಸ ಹಣಕಾಸು ವರ್ಷ ಆರಂಭವಾಗುವ ಮೊದಲು ಸರ್ಕಾರಿ ಇಲಾಖೆಗಳು ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಲು ಹೆಚ್ಚು ಸಮಯ ದೊರೆಯಿತು.
ಅದೇ ವರ್ಷ ಮತ್ತೊಂದು ಮಹತ್ವದ ನಿರ್ಧಾರವಾಗಿ, ಪ್ರತ್ಯೇಕ ರೈಲ್ವೆ ಬಜೆಟ್ ಪದ್ಧತಿಗೂ ತೆರೆ ಎಳೆಯಲಾಯಿತು. 1924ರಿಂದಲೂ ಕೇಂದ್ರ ಬಜೆಟ್ ಜೊತೆಗೆ ರೈಲ್ವೆ ಬಜೆಟ್ ಅನ್ನು ಪ್ರತ್ಯೇಕವಾಗಿ ಮಂಡಿಸಲಾಗುತ್ತಿತ್ತು. ಆದರೆ, ರೈಲ್ವೆ ಕ್ಷೇತ್ರದಲ್ಲಿ ಅಗತ್ಯವಿದ್ದ ಮೂಲಭೂತ ಸುಧಾರಣೆಗಳಿಗಿಂತ ಜನಪ್ರಿಯ ಘೋಷಣೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿತ್ತು ಎಂಬ ಕಾರಣದಿಂದ, ರೈಲ್ವೆ ಬಜೆಟ್ ಅನ್ನು ಕೇಂದ್ರ ಬಜೆಟ್ನಲ್ಲೇ ವಿಲೀನಗೊಳಿಸುವ ತೀರ್ಮಾನ ಕೈಗೊಳ್ಳಲಾಯಿತು.
ಬಜೆಟ್ ಸಂಪ್ರದಾಯದಲ್ಲಿ ಸಾಂಕೇತಿಕ ಬದಲಾವಣೆ 2019ರಲ್ಲಿ ಕಾಣಿಸಿಕೊಂಡಿತು. ದಶಕಗಳ ಕಾಲ ಬಳಕೆಯಲ್ಲಿದ್ದ ಲೆದರ್ ಸೂಟ್ಕೇಸ್ನಲ್ಲಿ ಬಜೆಟ್ ದಾಖಲೆಗಳನ್ನು ತರಿಸುವ ಪದ್ಧತಿಯನ್ನು ನಿರ್ಮಲಾ ಸೀತಾರಾಮನ್ ಅವರು ಕೈಬಿಟ್ಟು, ಭಾರತೀಯ ಪರಂಪರೆಯನ್ನು ಪ್ರತಿಬಿಂಬಿಸುವ ಬಹಿಖಾತಾದಲ್ಲಿ ಬಜೆಟ್ ಪುಸ್ತಕಗಳನ್ನು ಸಂಸತ್ತಿಗೆ ತರಲು ಆರಂಭಿಸಿದರು. ಈ ಬದಲಾವಣೆ ಭಾರತೀಯ ಸಂಸ್ಕೃತಿ ಮತ್ತು ಸ್ವದೇಶಿ ಪರಿಕಲ್ಪನೆಗೆ ಒತ್ತು ನೀಡುವ ಸಂಕೇತವಾಗಿ ಪರಿಗಣಿಸಲಾಯಿತು.
2021ರಲ್ಲಿ ಬಜೆಟ್ ಪ್ರಕ್ರಿಯೆಯಲ್ಲಿ ಮತ್ತೊಂದು ದೊಡ್ಡ ಬದಲಾವಣೆ ನಡೆಯಿತು. ಆ ವರ್ಷದಿಂದ ಬಜೆಟ್ ಪುಸ್ತಕವನ್ನು ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ಪರಿಚಯಿಸಲಾಯಿತು. ನಿರ್ಮಲಾ ಸೀತಾರಾಮನ್ ಅವರು ಟ್ಯಾಬ್ಲೆಟ್ನಲ್ಲಿ ಬಜೆಟ್ ಭಾಷಣ ಓದಿ, ಅದನ್ನು ಬಹಿಖಾತಾ ಶೈಲಿಯ ಹೊದಿಕೆಯಲ್ಲಿ ಇಟ್ಟುಕೊಂಡು ಸಂಸತ್ತಿಗೆ ಆಗಮಿಸಿದರು. ಈ ಕ್ರಮದಿಂದ ಕಾಗದ ಮತ್ತು ಮುದ್ರಣ ವೆಚ್ಚದ ಉಳಿತಾಯವಾಗುವುದರ ಜೊತೆಗೆ, ಡಿಜಿಟಲ್ ಇಂಡಿಯಾ ಕನಸಿನ ಸಾಂಕೇತಿಕ ಪ್ರತಿಬಿಂಬವೂ ಕಂಡುಬಂದಿತು.
2021ರಿಂದ ನಿರಂತರವಾಗಿ ಡಿಜಿಟಲ್ ರೂಪದಲ್ಲೇ ಬಜೆಟ್ ಮಂಡಿಸಲಾಗುತ್ತಿದ್ದು, ಇದು ಆಡಳಿತದಲ್ಲಿ ತಂತ್ರಜ್ಞಾನ ಬಳಕೆಗೆ ಸರ್ಕಾರ ನೀಡುತ್ತಿರುವ ಮಹತ್ವವನ್ನು ತೋರಿಸುತ್ತದೆ. 88ನೇ ಕೇಂದ್ರ ಬಜೆಟ್ ಮಂಡನೆಯೊಂದಿಗೆ, ನಿರ್ಮಲಾ ಸೀತಾರಾಮನ್ ಅವರು ಕೇವಲ ಹಣಕಾಸು ಘೋಷಣೆಗಳಲ್ಲಷ್ಟೇ ಅಲ್ಲದೆ, ಬಜೆಟ್ ಸಂಪ್ರದಾಯಗಳಲ್ಲಿಯೂ ಹೊಸ ಇತಿಹಾಸವನ್ನು ಬರೆಯುತ್ತಿರುವುದು ಸ್ಪಷ್ಟವಾಗುತ್ತಿದೆ.