ನವದೆಹಲಿ, ಜ. 31 (DaijiworldNews/TA): ಸಂತ ಗುರು ರವಿದಾಸ್ ಅವರ 649ನೇ ಜಯಂತಿ ಆಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ನಾಳೆ ಭಾನುವಾರ (ಫೆಬ್ರವರಿ 1) ಪಂಜಾಬ್ಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3.45ಕ್ಕೆ ಪಂಜಾಬ್ಗೆ ಆಗಮಿಸಲಿರುವ ಪ್ರಧಾನಿ, ಜಲಂಧರ್ ಜಿಲ್ಲೆಯಲ್ಲಿರುವ ದೇರಾ ಸಖಚಂದ್ ಬಲ್ಲನ್ ಗೆ ತೆರಳಿ, ಸಂತ ಗುರು ರವಿದಾಸ್ ಗೌರವಾರ್ಥ ನಡೆಯುವ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಧಾನಿ ಮೋದಿ ಅವರು ದೇರಾ ಸಖಚಂದ್ ಬಲ್ಲನ್ ಮಂದಿರಕ್ಕೆ ಭೇಟಿ ನೀಡಿ ಸಂತ ಗುರು ರವಿದಾಸ್ ಅವರ ಮೂರ್ತಿಗೆ ಪುಷ್ಪಾರ್ಚಣೆ ಮಾಡಲಿದ್ದಾರೆ. ಜೊತೆಗೆ ದೇರಾ ಸಖಚಂದ್ ಬಲ್ಲನ್ನ ಎರಡನೇ ಗದ್ದಿ ನಶೀನ್ (ಪೀಠಾಧಿಪತಿ) ಆಗಿರುವ ಸಂತ ಸರ್ವಣ ದಾಸ್ ಅವರಿಗೆ ಸಹ ಪುಷ್ಪಾರ್ಚಣೆ ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ಪರಿಕ್ರಮೆ ಹಾಗೂ ಆರ್ ದಾಸ್ ಕಾರ್ಯಕ್ರಮದಲ್ಲೂ ಪ್ರಧಾನಿ ಭಾಗವಹಿಸಲಿದ್ದಾರೆ.
ಅದಂಪುರ್ ವಿಮಾನ ನಿಲ್ದಾಣಕ್ಕೆ ಗುರು ರವಿದಾಸ್ ಹೆಸರು : ಪ್ರಧಾನಿ ಮೋದಿ ಅವರು ತಮ್ಮ ಪಂಜಾಬ್ ಪ್ರವಾಸದ ವೇಳೆ ಅದಂಪುರ್ನ ವಿಮಾನ ನಿಲ್ದಾಣಕ್ಕೆ ‘ಶ್ರೀ ಗುರು ರವಿದಾಸ್ಜಿ ಏರ್ಪೋರ್ಟ್’ ಎಂದು ನೂತನ ಹೆಸರು ಘೋಷಣೆ ಮಾಡಲಿದ್ದಾರೆ.
ಇದೇ ವೇಳೆ, ಲೂಧಿಯಾನ ಸಮೀಪದ ಹಲ್ವಾರ ಏರ್ಪೋರ್ಟ್ನಲ್ಲಿ ಹೊಸದಾಗಿ ನಿರ್ಮಿಸಲಾದ ಟರ್ಮಿನಲ್ ಕಟ್ಟಡದ ಉದ್ಘಾಟನೆಗೂ ಪ್ರಧಾನಿ ಚಾಲನೆ ನೀಡಲಿದ್ದಾರೆ. ಭಾರತೀಯ ವಾಯುಪಡೆಯ ಸ್ಟೇಷನ್ ಇರುವುದರಿಂದ ಹಲ್ವಾರ ಏರ್ಪೋರ್ಟ್ ತಂತ್ರಾತ್ಮಕ ಮಹತ್ವ ಪಡೆದಿದ್ದು, ಲೂಧಿಯಾನ ಹಾಗೂ ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಿಗೆ ಉತ್ತಮ ಸಂಪರ್ಕ ಕಲ್ಪಿಸಲಿದೆ. ಇಲ್ಲಿ ರನ್ವೇ ವಿಸ್ತರಣೆ ಸೇರಿದಂತೆ ಮೂಲಸೌಕರ್ಯಗಳನ್ನು ನವೀಕರಿಸಲಾಗಿದೆ.