ಮುಂಬೈ, ಜ. 31 (DaijiworldNews/TA): ವಿಮಾನಾಪಘಾತದಲ್ಲಿ ದುರ್ಮರಣಕ್ಕೀಡಾದ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಇಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ತಮ್ಮ ಪತಿ ಅಜಿತ್ ಪವಾರ್ ಅವರಿಂದ ಉಂಟಾದ ರಾಜಕೀಯ ಖಾಲಿತನವನ್ನು ಅವರು ತುಂಬಿದ್ದು, ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಅಧ್ಯಾಯಕ್ಕೆ ಚಾಲನೆ ನೀಡಿದ್ದಾರೆ.

ಮಹಾರಾಷ್ಟ್ರದ ಇತಿಹಾಸದಲ್ಲಿ ಮಹಿಳೆಯೊಬ್ಬರು ಉಪಮುಖ್ಯಮಂತ್ರಿಯಾಗಿರುವುದು ಇದೇ ಮೊದಲ ಬಾರಿ. ಇದರಿಂದಾಗಿ ಸುನೇತ್ರಾ ಪವಾರ್ ಅವರು ರಾಜ್ಯದ ಮೊದಲ ಮಹಿಳಾ ಉಪಮುಖ್ಯಮಂತ್ರಿ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.
ಬಹುತೇಕ ಜೀವನವನ್ನು ತಮ್ಮ ಪತಿಯ ನೆರಳಿನಲ್ಲೇ ಕಳೆದಿದ್ದ ಸುನೇತ್ರಾ ಪವಾರ್, 61ನೇ ವಯಸ್ಸಿನಲ್ಲಿ ಸಕ್ರಿಯ ರಾಜಕಾರಣ ಪ್ರವೇಶಿಸಿದರು. ಪ್ರಬಲ ರಾಜಕೀಯ ಹಿನ್ನೆಲೆಯ ಕುಟುಂಬದಲ್ಲಿ ಹುಟ್ಟಿ ಬೆಳೆದರೂ, ಅವರು ಹೆಚ್ಚಿನ ಸಮಯವನ್ನು ಕುಟುಂಬ ಪಾಲನೆ ಮತ್ತು ಸಾಮಾಜಿಕ ಕಾರ್ಯಗಳಿಗೆ ಮೀಸಲಿಟ್ಟಿದ್ದರು. ಅವರ ಸಹೋದರ ಪದಂಸಿಂಗ್ ಬಾಜಿರಾವ್ ಪಾಟೀಲ್ ಮಾಜಿ ಸಚಿವರಾಗಿದ್ದು, ಎನ್ಸಿಪಿ ಪಕ್ಷದ ಸ್ಥಾಪಕರಲ್ಲಿ ಒಬ್ಬರಾಗಿದ್ದರು. ಅವರು ಶರದ್ ಪವಾರ್ ಅವರ ಆಪ್ತರಾಗಿಯೂ ಗುರುತಿಸಿಕೊಂಡಿದ್ದರು.
ತಮ್ಮ ಪತಿ ಪ್ರತಿನಿಧಿಸುತ್ತಿದ್ದ ಬಾರಾಮತಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುವುದರಲ್ಲೇ ಸುನೇತ್ರಾ ಪವಾರ್ ತೃಪ್ತರಾಗಿದ್ದರು. ಆದರೆ ಲೋಕಸಭಾ ಚುನಾವಣೆಯಲ್ಲಿ ಬಾರಾಮತಿ ಕ್ಷೇತ್ರದಿಂದ ಸ್ಪರ್ಧಿಸುವ ಮೂಲಕ ಅವರು ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟರು. ಆ ಚುನಾವಣೆಯಲ್ಲಿ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಲೆ ವಿರುದ್ಧ ಸ್ಪರ್ಧಿಸಿ ಸೋಲು ಕಂಡರು.
ನಂತರ ಅವರನ್ನು ರಾಜ್ಯಸಭಾ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಲಾಗಿದ್ದು, ಈ ಮೂಲಕ ಅವರು ಸಂಸದರಾದರು. ಇದು ಅವರ ರಾಜಕೀಯ ಜೀವನದ ಪ್ರಮುಖ ತಿರುವಾಗಿ ಪರಿಣಮಿಸಿತು. ಇದೀಗ ಸುನೇತ್ರಾ ಪವಾರ್ ಅವರನ್ನು ಎನ್ಸಿಪಿ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಲಾಗಿದ್ದು, ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಛಗನ್ ಭುಜಬಲ್, ಪ್ರಫುಲ್ ಪಟೇಲ್ ಸೇರಿದಂತೆ ಅನುಭವಿ ನಾಯಕರು ಇರುವ ಪಕ್ಷವನ್ನು ಮುನ್ನಡೆಸುವ ಮಹತ್ವದ ಜವಾಬ್ದಾರಿ ಅವರ ಹೆಗಲಿಗಿದೆ.
ಸಕ್ರಿಯ ಆಡಳಿತದ ಅನುಭವ ಕಡಿಮೆ ಇದ್ದರೂ, ರಾಜ್ಯದ ಆಡಳಿತ ಹಾಗೂ ಪಕ್ಷದ ಒಗ್ಗಟ್ಟನ್ನು ಕಾಪಾಡುವ ಸವಾಲುಗಳನ್ನು ಅವರು ಎದುರಿಸಬೇಕಾಗಿದೆ. ಮಹಾರಾಷ್ಟ್ರ ರಾಜಕೀಯದಲ್ಲಿ ಮಹಿಳಾ ನಾಯಕತ್ವಕ್ಕೆ ಇದು ಹೊಸ ದಿಕ್ಕು ನೀಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.