ಬೆಂಗಳೂರು, ಜ. 30 (DaijiworldNews/AA): ಸರ್ಕಾರಿ ಬಸ್ಗಳ ಮೇಲೆ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ತೆಗೆಯಲು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಾಲ್ಕು ನಿಗಮಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಮತ್ತು ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವ ನೇರವಾದ ಅಥವಾ ಪರೋಕ್ಷವಾದ ಜಾಹೀರಾತುಗಳನ್ನು ಕೂಡಲೇ ತೆಗೆದುಹಾಕಬೇಕು. ಈ ಮೂಲಕ ತಂಬಾಕು ಉತ್ಪನ್ನಗಳ ಜಾಹೀರಾತು ಪ್ರಚಾರ ಮಾಡದಂತೆ 4 ನಿಗಮದ ಎಂಡಿಗಳಿಗೆ ಸಚಿವರು ನಿರ್ದೇಶಿಸಿದ್ದಾರೆ.
ಈಗಾಗಲೇ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವಂತಹ ಜಾಹೀರಾತುಗಳನ್ನು ಬಸ್ಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಅಳವಡಿಸಿದ್ದರೆ ಅದನ್ನು ತೆಗೆಯಲು ಒಂದು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿ, ಆ ನಿಗದಿತ ಸಮಯದೊಳಗೆ ಸದರಿ ಜಾಹೀರಾತುಗಳನ್ನು ತೆಗೆದು ಹಾಕುವಂತೆ ಸಂಬಂಧಪಟ್ಟವರಿಗೆ ಕಟ್ಟುನಿಟ್ಟಾಗಿ ನಿರ್ದೇಶನ ನೀಡುವಂತೆ ಸೂಚಿಸಿದ್ದಾರೆ.
ಆದಾಯ ಹೆಚ್ಚಿಸುವ ಉದ್ದೇಶದಿಂದ ರಾಜ್ಯದ ಎಲ್ಲಾ ಸಾರಿಗೆ ಬಸ್ಗಳ ಮೇಲೂ ಜಾಹೀರಾತುಗಳನ್ನು ಅಳವಡಿಸಲಾಗಿತ್ತು. ಅವುಗಳಲ್ಲಿ ಕೆಲವು ತಂಬಾಕು ಉತ್ಪನ್ನಗಳಿಗೆ ಸಂಬಂಧಿಸಿದ ಜಾಹೀರಾತುಗಳಾಗಿದ್ದವು. ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಪರಿಣಾಮವಾಗಿ, ಹಲವು ಕಡೆಗಳಲ್ಲಿ ಬಸ್ಗಳ ಮೇಲಿದ್ದ ಜಾಹೀರಾತುಗಳನ್ನು ಜನರು ಕಿತ್ತು ಹಾಕಿದ್ದರು.