ಬೆಂಗಳೂರು, ಜ. 30 (DaijiworldNews/AA): ಕೇರಳ ಮೂಲದ ಖ್ಯಾತ ಉದ್ಯಮಿ ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿ.ಜೆ ರಾಯ್ ಅವರು ಶುಕ್ರವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮುಂದೆಯೇ ಪಿಸ್ತೂಲ್ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇಂದು ಕಾನ್ಫಿಡೆಂಡ್ ಗ್ರೂಪ್ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೇ ರೀತಿ ಕಳೆದ ಮೂರು ವರ್ಷಗಳಿಂದ ಐಟಿ ದಾಳಿ ನಡೆಯುತ್ತಿತ್ತು. ಪದೇ ಪದೇ ಆದ ಐಟಿ ದಾಳಿಯಿಂದ ಬೇಸತ್ತಿದ್ದ ಸಿ.ಜೆ. ರಾಯ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಐಟಿ ಇಲಾಖೆಯ 8 ಜನರ ಅಧಿಕಾರಿಗಳ ತಂಡ ಇಂದು ಬೆಳಗ್ಗೆ ಉದ್ಯಮಿಯ ಕಚೇರಿಗಳ ದಾಳಿ ನಡೆಸಿತ್ತು. ಮಧ್ಯಾಹ್ನ ಕಚೇರಿಗೆ ಬಂದಿದ್ದ ಉದ್ಯಮಿ ಸಿ.ಜೆ.ರಾಯ್, 1 ಗಂಟೆ ಐಟಿ ವಿಚಾರಣೆ ಎದುರಿಸಿದ್ದಾರೆ. ಅಧಿಕಾರಿಗಳಿಗೆ ಕೆಲ ದಾಖಲೆ ಸಹ ಕೊಟ್ಟಿದ್ದಾರೆ. ಮತ್ತಷ್ಟು ದಾಖಲೆ ತರಲು ರೂಮ್ಗೆ ಹೋಗಿದ್ದಾರೆ. ಈ ವೇಳೆ ಪಿಸ್ತೂಲ್ನಿಂದ ಎದೆಗೆ ಗುಂಡು ಹಾರಿಸಿಕೊಂಡಿದ್ದಾರೆ ಎನ್ನಲಾಗಿದೆ.
ಒಂದು ಸುತ್ತು ಗುಂಡು ಹಾರಿಸಿಕೊಳ್ಳುತ್ತಿದ್ದಂತೆ ಗನ್ ಕಿತ್ತುಕೊಂಡಿರುವ ಐಟಿ ಅಧಿಕಾರಿಗಳು, ರಕ್ಷಣೆಗೆ ಪ್ರಯತ್ನಿಸಿದ್ದಾರೆ. ಆದರೆ ಅದಾಗಲೇ ಉದ್ಯಮಿ ಮೃತಪಟ್ಟಿದ್ದಾರೆ. ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಇನ್ನು ಈ ಘಟನೆ ಹಲವು ಅನುಮಾನಗಳನ್ನು ಸೃಷ್ಟಿಸಿದೆ. ಸಾಮಾನ್ಯವಾಗಿ ಐಟಿ ಅಧಿಕಾರಿಗಳು ದಾಳಿ ನಡೆಸುವ ವೇಳೆ ಅಗತ್ಯವಿರುವ ಎಲ್ಲಾ ವಸ್ತುಗಳನ್ನ ವಶಕ್ಕೆ ಪಡೆಯುತ್ತಾರೆ. ಆದರೆ ಸಿ.ಜೆ ರಾಯ್ ಅವರ ಬಳಿಯಿದ್ದ ಗನ್ ವಶಕ್ಕೆ ಪಡೆಯದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಘಟನೆ ಬಳಿಕ ಬೆಂಗಳೂರು ಕೇಂದ್ರ ವಿಭಾಗ ಡಿಸಿಪಿ ಅಕ್ಷಯ್ ಅವರು ಐಟಿ ಅಧಿಕಾರಿಗಳ ವಿಚಾರಣೆ ನಡೆಸಿದ್ದಾರೆ. ನಂತರ ಅಧಿಕಾರಿಗಳು ದಾಳಿ ವೇಳೆ ಸಿಕ್ಕ ದಾಖಲೆಗಳನ್ನ ವಶಕ್ಕೆ ಪಡೆದು ತೆರಳಿದ್ದಾರೆ. ಈ ಬಗ್ಗ ತನಿಖೆ ಮುಂದುವರೆಸಲಾಗಿದೆ.
ಸಿ.ಜೆ. ರಾಯ್ ಅವರು ಕಾನ್ಫಿಡೆಂಟ್ ಗ್ರೂಪ್ನ ಅಧ್ಯಕ್ಷ ಮತ್ತು ಸಂಸ್ಥಾಪಕರಾಗಿದ್ದರು. ಅವರು ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ. ಹಲವು ಕ್ಷೇತ್ರಗಳಲ್ಲಿ ತಮ್ಮ ವ್ಯಾಪಾರ ಸಾಮ್ರಾಜ್ಯವನ್ನ ವಿಸ್ತರಿಸಿರುವ ಅವರು, ಸ್ಲೋವಾಕ್ ಗಣರಾಜ್ಯದ ಗೌರವ ಕಾನ್ಸಲ್ ಆಗಿಯೂ ಕರ್ನಾಟಕ ಮತ್ತು ಕೇರಳದಲ್ಲಿ ಸೇವೆ ಸಲ್ಲಿಸಿದ್ದರು.