ಬೆಂಗಳೂರು, ಜ. 28(DaijiworldNews/ AK): ಸಾರಿಗೆ ನೌಕರರ ಮುಖಂಡ ಅನಂತ್ ಸುಬ್ಬರಾವ್ (85) ನಿಧನರಾಗಿದ್ದಾರೆ. ಇಂದು (ಜನವರಿ 28) ಸಂಜೆ ಅನಂತ್ ಸುಬ್ಬರಾವ್ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಬೆಂಗಳೂರಿನ ವಿಜಯನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಧೃಏ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

85 ವರ್ಷದ ಅನಂತ್ ಸುಬ್ಬರಾವ್ ಅವರು ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷರಾಗಿದ್ದರು. ಕಳೆದ ಐದು ದಶಕಗಳಿಂದ ಸಾರಿಗೆ ನೌಕರರ ಪರ ಹೋರಾಟ ಮಾಡಿಕೊಂಡು ಬಂದಿದ್ದರು. ಇದರಂತೆ ನಾಳೆ(ಜನವರಿ 29) ಸಾರಿಗೆ ನೌಕರರಿಗೆ ಬೆಂಗಳೂರು ಚಲೋಗೆ ಕರೆ ನೀಡಿದ್ದರು. ಅದರೆ ಇದೀಗ ಅವರ ನಿಧನದಿಂದಾಗಿ ಬೆಂಗಳೂರು ಚಲೋ ಮುಂದೂಡಿಕೆಯಾಗಿದ್ದು, ಎಂದಿನಂತೆ ಬಸ್ ಸಂಚಾರ ಇರಲಿದೆ.
ಅನಂತ್ ಸುಬ್ಬರಾವ್ ಮೂಲತಃ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನವರು. ಅನಂತ ಸುಬ್ಬರಾವ್ ನೇತೃತ್ವದಲ್ಲೇ ನಾಳೆ ಮುಷ್ಕರ ಹಾಗೂ ಬೆಂಗಳೂರು ಚಲೋ ನಡೆಸಲು ಸಾರಿಗೆ ನೌಕರರು ನಿರ್ಧರಿಸಿದ್ದರು. ಈಗ ಅನಂತ್ ಸುಬ್ಬರಾವ್ ನಿಧನರಾದ ಹಿನ್ನಲೆಯಲ್ಲಿ ನಾಳೆ ನಡೆಯಬೇಕಾಗಿದ್ದ ಸಾರಿಗೆ ನೌಕರರ ಮುಷ್ಕರ ಹಾಗೂ ಬೆಂಗಳೂರು ಚಲೋವನ್ನು ಮುಂದೂಡಲಾಗಿದೆ.