ಬೆಂಗಳೂರು, ಜ. 28(DaijiworldNews/TA): ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಹಗರಣ ಪ್ರಕರಣದಲ್ಲಿ ಲೋಕಾಯುಕ್ತ ನೀಡಿದ್ದ ‘ಬಿ-ರಿಪೋರ್ಟ್’ ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪುರಸ್ಕರಿಸಿದೆ. ಈ ಮೂಲಕ ಲೋಕಾಯುಕ್ತ ಪೊಲೀಸರ ಕ್ಲೀನ್ಚಿಟ್ ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಸಂಬಂಧಿ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಜಮೀನು ಮಾಲೀಕ ದೇವರಾಜು ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ-ರಿಪೋರ್ಟ್ ಅನ್ನು ನ್ಯಾಯಾಲಯ ಒಪ್ಪಿಕೊಂಡಿದೆ. ವಾದ–ಪ್ರತಿವಾದಗಳನ್ನು ಆಲಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಈ ಮಹತ್ವದ ಆದೇಶ ಹೊರಡಿಸಿದ್ದಾರೆ.
ಲೋಕಾಯುಕ್ತ ಬಿ-ರಿಪೋರ್ಟ್ ಪುರಸ್ಕೃತಗೊಂಡ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಕುಟುಂಬಕ್ಕೆ ತಾತ್ಕಾಲಿಕವಾಗಿ ಭಾರೀ ರಿಲೀಫ್ ದೊರೆತಂತಾಗಿದೆ. ಈ ಆದೇಶದಿಂದಾಗಿ ಮುಡಾ ಹಗರಣದಲ್ಲಿ ಸಿಎಂ ವಿರುದ್ಧ ಮಾಡಲಾಗಿದ್ದ ಆರೋಪಗಳಿಗೆ ಬಲವಾದ ಸಾಕ್ಷ್ಯಾಧಾರಗಳಿಲ್ಲ ಎಂಬುದು ನ್ಯಾಯಾಲಯದ ಮಟ್ಟದಲ್ಲಿ ಸ್ಪಷ್ಟವಾಗಿದೆ.
ಏನಿದು ‘ಬಿ-ರಿಪೋರ್ಟ್’?: ಸಾಮಾನ್ಯವಾಗಿ ಪೊಲೀಸರು, ಲೋಕಾಯುಕ್ತ, ಸಿಬಿಐ ಅಥವಾ ಇಡಿ ಮುಂತಾದ ತನಿಖಾ ಸಂಸ್ಥೆಗಳು ಪ್ರಕರಣದಲ್ಲಿ ಆರೋಪ ಸಾಬೀತಾಗಲು ಅಗತ್ಯ ಸಾಕ್ಷ್ಯ ದೊರಕದಿದ್ದಲ್ಲಿ ‘ಬಿ-ರಿಪೋರ್ಟ್’ ಸಲ್ಲಿಸುತ್ತವೆ. ಮುಡಾ ಹಗರಣ ಪ್ರಕರಣದಲ್ಲೂ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ನಾಲ್ವರು ಆರೋಪಿಗಳ ವಿರುದ್ಧ ಯಾವುದೇ ಅಪರಾಧ ಸಾಬೀತಾಗಿಲ್ಲ ಎಂದು ವರದಿ ಸಲ್ಲಿಸಿದ್ದರು. ಇದೀಗ ಆ ವರದಿಯನ್ನು ಕೋರ್ಟ್ ಅಂಗೀಕರಿಸಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ಅವರು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸುವ ಅವಕಾಶ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಪ್ರಕರಣದ ಹಿನ್ನೆಲೆ: ಮೈಸೂರು ತಾಲೂಕಿನ ಕೆಸರೆ ಗ್ರಾಮದ ಸರ್ವೇ ನಂ. 464ರಲ್ಲಿ ಪಾರ್ವತಿ ಸಿದ್ದರಾಮಯ್ಯ ಅವರ ಹೆಸರಿನಲ್ಲಿದ್ದ 3 ಎಕರೆ 16 ಗುಂಟೆ ಜಮೀನನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಬಳಸಿಕೊಂಡಿತ್ತು. ಇದರ ಬದಲಾಗಿ ವಿಜಯನಗರ 3 ಮತ್ತು 4ನೇ ಹಂತದಲ್ಲಿ 14 ನಿವೇಶನಗಳನ್ನು ಪಾರ್ವತಿ ಸಿದ್ದರಾಮಯ್ಯ ಅವರಿಗೆ ಮಂಜೂರು ಮಾಡಲಾಗಿತ್ತು. ಈ ವಿಷಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ನಂತರ ಪಾರ್ವತಿ ಸಿದ್ದರಾಮಯ್ಯ ಅವರು ಈ 14 ಸೈಟುಗಳನ್ನು ವಾಪಸ್ ನೀಡುವುದಾಗಿ ಘೋಷಿಸಿದ್ದರು. ಈ ಪ್ರಕರಣದ ಕುರಿತು ತನಿಖೆ ನಡೆಸಿದ ಮೈಸೂರು ಲೋಕಾಯುಕ್ತ ಪೊಲೀಸರು, ಯಾವುದೇ ಅಕ್ರಮ ನಡೆದಿರುವುದಕ್ಕೆ ಸಾಕ್ಷ್ಯ ಸಿಗದ ಹಿನ್ನೆಲೆ ‘ಬಿ-ರಿಪೋರ್ಟ್’ ಸಲ್ಲಿಸಿದ್ದರು. ಇದೀಗ ಕೋರ್ಟ್ ಕೂಡ ಅದನ್ನೇ ಮಾನ್ಯ ಮಾಡಿದೆ.
ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ ಸೇಫ್ : ರಾಜಕೀಯ ಜೀವನದಲ್ಲಿ ‘ಕ್ಲೀನ್ ಇಮೇಜ್’ ನಾಯಕನಾಗಿ ಗುರುತಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರನ್ನು ಮುಡಾ ಹಗರಣ ಸುತ್ತಿಕೊಂಡು ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡಿತ್ತು. ಆದರೆ ಈಗ ಕೋರ್ಟ್ ಆದೇಶದ ಮೂಲಕ ಅವರು ಸದ್ಯಕ್ಕೆ ನಿರಾಳವಾಗಿದ್ದಾರೆ.