ಬೆಂಗಳೂರು, ಜ. 21 (DaijiworldNews/AA): ಜಂಟಿ ಅಧಿವೇಶನ ಆರಂಭಕ್ಕೂ ಮುನ್ನವೇ ರಾಜ್ಯಪಾಲ ಥಾವರ್ ಸಿಂಗ್ ಗೆಹ್ಲೋಟ್ ರಾಜ್ಯ ಸರ್ಕಾರಕ್ಕೆ ಶಾಕ್ ನೀಡಿದ್ದು, ನಾಳಿನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಓದಲು ನಿರಾಕರಿಸಿದ್ದಾರೆ.

ದಕ್ಷಿಣ ರಾಜ್ಯಗಳ ಮೇಲೆ ತಾರತಮ್ಯ ವಿಚಾರವಾಗಿ ರಾಜ್ಯ ಸರ್ಕಾರ ಐದಾರು ಬಾರಿ ಕೇಂದ್ರ ಸರ್ಕಾರದ ಮೇಲೆ ಅಸಮಾಧಾನ ವ್ಯಕ್ತಪಡಿಸಿದ ಅಂಶವನ್ನು ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖಿಸಲಾಗಿದೆ. ಭಾಷಣದಲ್ಲಿ ಈ ವಿಚಾರ ಪ್ರಸ್ತಾಪವಾದ ಬೆನ್ನಲ್ಲೇ ರಾಜ್ಯಪಾಲರು ಭಾಷಣ ಓದದೇ ಇರಲು ನಿರ್ಧರಿಸಿದ್ದಾರೆ.
ರಾಜ್ಯಪಾಲರು ತಮ್ಮ ನಿರ್ಧಾರ ಪ್ರಕಟಿಸುತ್ತಿದ್ದಂತೆ ಮಧ್ಯಾಹ್ನ 1 ಗಂಟೆಗೆ ರಾಜಭವನದಿಂದ ಕಾನೂನು ಸಚಿವ ಹೆಚ್.ಕೆ.ಪಾಟೀಲ್ಗೆ ಕರೆ ಬಂದಿದೆ. ಕರೆಯಲ್ಲಿ ಈ ಭಾಷಣವನ್ನು ರಾಜ್ಯಪಾಲರು ಓದಲು ಸಾಧ್ಯವಿಲ್ಲ. ಭಾಷಣವನ್ನು ಬದಲಿಸದೇ ಇದ್ದರೆ ರಾಜ್ಯಪಾಲರು ಭಾಷಣಕ್ಕೆ ಬರುವುದಿಲ್ಲ ಎಂದು ಸರ್ಕಾರಕ್ಕೆ ತಿಳಿಸಲಾಗಿದೆ.