ಬೆಂಗಳೂರು, ಜ. 21 (DaijiworldNews/ TA): ಕಳೆದೊಂದು ತಿಂಗಳಿನಿಂದ ಮನೆ ಊಟಕ್ಕಾಗಿ ಹಂಬಲಿಸುತ್ತಿದ್ದ ಪವಿತ್ರ ಗೌಡಗೆ ಹೈಕೋರ್ಟ್ ಭಾರಿ ಆಘಾತ ನೀಡಿದೆ. ಕಾನೂನಿನಲ್ಲಿ ಮನೆ ಊಟಕ್ಕೆ ಯಾವುದೇ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ಜೈಲಿನಲ್ಲಿ ಆರೋಪಿಗಳಿಗೆ ಮನೆ ಊಟ ನೀಡುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಸೆಷನ್ಸ್ ಕೋರ್ಟ್ ನೀಡಿದ್ದ ಆದೇಶಕ್ಕೆ ತಡೆ ನೀಡಿದೆ.

ಕಳೆದ ನಾಲ್ಕು ತಿಂಗಳಿನಿಂದ ಜೈಲಿನ ಊಟ ಸೇವಿಸುತ್ತಿದ್ದು, ಅದರ ಪರಿಣಾಮವಾಗಿ ದಿನದಿಂದ ದಿನಕ್ಕೆ ಆರೋಗ್ಯ ಸಮಸ್ಯೆ ಎದುರಾಗುತ್ತಿದೆ ಎಂದು ಹೇಳಿಕೊಂಡಿದ್ದ ಪವಿತ್ರ ಗೌಡ, ಮನೆ ಊಟ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸೆಷನ್ಸ್ ಕೋರ್ಟ್ ವಾರಕ್ಕೆ ಒಮ್ಮೆ ಮನೆ ಊಟ ನೀಡಲು ಅನುಮತಿ ನೀಡಿದ್ದರಿಂದ ಪವಿತ್ರ ಗೌಡಗೆ ತಾತ್ಕಾಲಿಕವಾಗಿ ನೆಮ್ಮದಿ ಸಿಕ್ಕಿತ್ತು. ಆದರೆ ಈ ಆದೇಶಕ್ಕೆ ಕಾರಾಗೃಹ ಇಲಾಖೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಒಬ್ಬರಿಗೆ ಮನೆ ಊಟಕ್ಕೆ ಅವಕಾಶ ನೀಡಿದರೆ, ಉಳಿದ ಎಲ್ಲ ಆರೋಪಿಗಳೂ ಇದೇ ಆದೇಶವನ್ನು ಉಲ್ಲೇಖಿಸಿ ಮನೆ ಊಟಕ್ಕೆ ಬೇಡಿಕೆ ಇಡುತ್ತಾರೆ. ಇದರಿಂದ ಜೈಲಿನಲ್ಲಿ ಊಟ ವ್ಯವಸ್ಥೆ ನಡೆಸುವುದೇ ಕಷ್ಟಕರವಾಗುತ್ತದೆ. ಅಲ್ಲದೇ, ಮನೆ ಊಟಕ್ಕೆ ಅವಕಾಶ ನೀಡುವುದರಿಂದ ಜೈಲಿನ ಆಹಾರ ಕಳಪೆ ಎಂಬ ಅರ್ಥ ಹೊರಬರುತ್ತದೆ ಎಂದು ಇಲಾಖೆ ವಾದಿಸಿತ್ತು. ಸೆಷನ್ಸ್ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಕಾರಾಗೃಹ ಇಲಾಖೆ ಹೈಕೋರ್ಟ್ ಮೊರೆ ಹೋಗಿತ್ತು.
ಹೈಕೋರ್ಟ್ನಲ್ಲಿ ರಾಜ್ಯ ಪರವಾಗಿ ವಾದ ಮಂಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ (SPP) ಜಗದೀಶ್, ಜೈಲಿನ ಊಟವು ಸಂಪೂರ್ಣವಾಗಿ ಪ್ರಮಾಣೀಕೃತವಾಗಿದ್ದು, ಅದು ಕಳಪೆ ಆಹಾರ ಅಲ್ಲ ಎಂದು ತಿಳಿಸಿದರು. ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಜೈಲಿನ ಆಹಾರಕ್ಕೆ ಈಗಾಗಲೇ 4 ಸ್ಟಾರ್ ನೀಡಿದೆ. ಇದುವರೆಗೂ ಯಾವುದೇ ಆರೋಪಿಯೂ ಜೈಲು ಊಟದ ಬಗ್ಗೆ ದೂರು ನೀಡಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದರು.
ವಾದ ಆಲಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ, ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ಸ್ಪಷ್ಟಪಡಿಸಿ, ಯಾವುದೇ ಆರೋಪಿಗೂ ವಿಶೇಷ ಸವಲತ್ತು ನೀಡಲಾಗುವುದಿಲ್ಲ ಎಂದು ಹೇಳಿತು. ವಿಶೇಷ ಸವಲತ್ತು ನೀಡಿದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್ ಈಗಾಗಲೇ ಎಚ್ಚರಿಕೆ ನೀಡಿದೆ ಎಂಬುದನ್ನು ಉಲ್ಲೇಖಿಸಿದ ನ್ಯಾಯಾಲಯ, ಸೆಷನ್ಸ್ ಕೋರ್ಟ್ ಆದೇಶಕ್ಕೆ ತಡೆ ನೀಡಿತು. ಜೊತೆಗೆ, ಯಾವುದೇ ಆರೋಪಿಗೂ ಮನೆ ಊಟ ನೀಡಬಾರದು ಎಂದು ಸ್ಪಷ್ಟ ನಿರ್ದೇಶನ ನೀಡಿತು. ಒಟ್ಟಿನಲ್ಲಿ ಕಳೆದ ನಾಲ್ಕು ತಿಂಗಳಿಂದ ಹಾಸಿಗೆ, ದಿಂಬು, ಬ್ಲ್ಯಾಂಕೆಟ್ ಹಾಗೂ ಮನೆ ಊಟದಂತಹ ಸೌಲಭ್ಯಗಳನ್ನು ನಿರೀಕ್ಷಿಸಿ ಕಾಲ ಕಳೆಯುತ್ತಿದ್ದ ಪವಿತ್ರ ಗೌಡ ಹಾಗೂ ಅವರ ಜೊತೆಗಾರರಿಗೆ ಹೈಕೋರ್ಟ್ ಆದೇಶ ಮತ್ತೊಂದು ದೊಡ್ಡ ಶಾಕ್ ಆಗಿದೆ.