ನವದೆಹಲಿ, ಜ. 20 (DaijiworldNews/ TA): ಭಾರತೀಯ ಜನತಾ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರಿಗೆ ಕೇಂದ್ರ ಸರ್ಕಾರ ಉನ್ನತ ಮಟ್ಟದ ವಿಐಪಿ ಭದ್ರತೆ ಒದಗಿಸಿದೆ. ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್)ಯ ವಿಐಪಿ ಭದ್ರತಾ ವಿಭಾಗವು ನಿತಿನ್ ನಬಿನ್ ಅವರಿಗೆ Z ಶ್ರೇಣಿಯ ಭದ್ರತೆಯನ್ನು ನೀಡಲಿದೆ.

ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಿದ ತಕ್ಷಣವೇ, ಅವರಿಗೆ ಭದ್ರತೆ ಒದಗಿಸುವಂತೆ ಕೇಂದ್ರ ಗೃಹ ಸಚಿವಾಲಯವು ಸಿಆರ್ಪಿಎಫ್ಗೆ ಸೂಚನೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ನಿರ್ಗಮಿತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೂ ಇದೇ ರೀತಿಯ ಭದ್ರತಾ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಒದಗಿಸಿತ್ತು.
ಐದು ಬಾರಿ ಬಿಹಾರ ಶಾಸಕರಾಗಿರುವ ನಿತಿನ್ ನಬಿನ್ ಅವರು ಸೋಮವಾರ (ಜ.20) ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಈ ಮೂಲಕ ಪಕ್ಷದ ಉನ್ನತ ಹುದ್ದೆಯನ್ನು ಅಲಂಕರಿಸಿದ ಅತ್ಯಂತ ಕಿರಿಯ ನಾಯಕ ಎಂಬ ದಾಖಲೆಗೂ ಅವರು ಪಾತ್ರರಾಗಿದ್ದಾರೆ. ನಿತಿನ್ ನಬಿನ್ ಅವರನ್ನು ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ, ಅವರು ಪಕ್ಷದ ಪರಂಪರೆಯನ್ನು ಮುಂದುವರಿಸುವ ಮಿಲೇನಿಯಲ್ ನಾಯಕ ಎಂದು ಶ್ಲಾಘಿಸಿದರು.
ಕೇಂದ್ರ ರಕ್ಷಣಾ ಪಟ್ಟಿಯಡಿಯಲ್ಲಿ ವಿಐಪಿ ಭದ್ರತೆಯು ಝಡ್-ಪ್ಲಸ್, ಝಡ್, ವೈ, ವೈ-ಪ್ಲಸ್ ಮತ್ತು ಎಕ್ಸ್ ಎಂಬ ವಿವಿಧ ವರ್ಗಗಳನ್ನು ಒಳಗೊಂಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಗಾಂಧಿ ಕುಟುಂಬದ ಸದಸ್ಯರು ಸೇರಿದಂತೆ ಹಲವು ಪ್ರಮುಖ ರಾಜಕಾರಣಿಗಳು ಮತ್ತು ಉನ್ನತ ಹುದ್ದೆಯಲ್ಲಿರುವ ಗಣ್ಯರಿಗೆ ಸಿಆರ್ಪಿಎಫ್ ಸಿಬ್ಬಂದಿಯಿಂದ ಈ ಭದ್ರತೆ ಒದಗಿಸಲಾಗುತ್ತಿದೆ. ನಿತಿನ್ ನಬಿನ್ ಅವರಿಗೆ Z ಶ್ರೇಣಿಯ ಭದ್ರತೆ ನೀಡಿರುವುದು ಅವರ ಹುದ್ದೆ ಮತ್ತು ಭದ್ರತಾ ಅವಶ್ಯಕತೆಯನ್ನು ಪರಿಗಣಿಸಿ ತೆಗೆದುಕೊಳ್ಳಲಾದ ನಿರ್ಧಾರವೆಂದು ಮೂಲಗಳು ತಿಳಿಸಿವೆ.