ಬೆಂಗಳೂರು, ಜ. 19 (DaijiworldNews/ AK): ಸಿದ್ದರಾಮಯ್ಯನವರು ಪ್ರಾಮಾಣಿಕರೆಂದು ಬಿಂಬಿಸಲು, ಈ ರಾಜ್ಯದ ಸಿಎಂ ಆಗಿ ಕಾನೂನು ರಕ್ಷಿಸಲು ನಾನು ನಿಜವಾಗಿಯೂ ಕಂಕಣಬದ್ಧವಾಗಿ ಇದ್ದೇನೆ ಎಂದು ತೋರಿಸಲು 7 ಪ್ರಕರಣಗಳನ್ನು ಸಿಬಿಐಗೆ ಕೊಟ್ಟವರು. ಅಂಥ ಮಹಾನುಭಾವ, ಬಳ್ಳಾರಿಯ ಪ್ರಕರಣವನ್ನು ಸಿಬಿಐಗೆ ಕೊಡಲು ಯಾಕೆ ಹಿಂದೇಟು ಹಾಕುತ್ತಾರೆ ಎಂದು ಶಾಸಕ ಜಿ. ಜನಾರ್ಧನ ರೆಡ್ಡಿ ಅವರು ಸವಾಲು ಹಾಕಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ರಾಜ್ಯದ ಮುಖ್ಯಮಂತ್ರಿಯಾಗಿ ನಾನು ಇರುವ ಸಂದರ್ಭದಲ್ಲಿ ಸುಮಾರು 7 ಪ್ರಕರಣಗಳನ್ನು ಸಿಬಿಐಗೆ ಕೊಟ್ಟಿದ್ದೇನೆ. ಬಿಜೆಪಿಯವರು ಒಂದು ಕೇಸನ್ನಾದರೂ ಸಿಬಿಐಗೆ ಕೊಟ್ಟಿದ್ದಾರಾ ಎಂದು ಮುಖ್ಯಮಂತ್ರಿಗಳು ಕೇಳಿದ್ದಾರೆ.
ಯಡಿಯೂರಪ್ಪ ಅವರ ಸರಕಾರದ ಅವಧಿಯಲ್ಲಿ ಎಷ್ಟು ಸಿಬಿಐಗೆ ಕೊಟ್ಟಿದ್ದಾರೆ, ಸಿದ್ದರಾಮಯ್ಯರ ಅವಧಿಯಲ್ಲಿ ಎಷ್ಟು ಸಿಬಿಐಗೆ ವಹಿಸಿದ್ದಾರೆ ಎಂಬ ಪ್ರಶ್ನೆ ಮುಖ್ಯವಲ್ಲ ಎಂದು ನುಡಿದರು.ನಿಮ್ಮ ಶಾಸಕನೇ ಕೊಲೆ ಮಾಡಿಸಿದ್ದೆಂದು ನಿಮಗೆ ಈಗಾಗಲೇ ಗೊತ್ತಾಗಿದೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಈಗಾಗಲೇ ಮುಜುಗರ ಆಗಿದೆ. ಕೇವಲ ಮೂವರು ಖಾಸಗಿ ಗನ್ಮೆನ್ಗಳನ್ನು ಬಂಧಿಸಿ, ಸಿಐಡಿಗೆ ಕೊಡುವ ಮೂಲಕ ಇದನ್ನು ಜನರು ಮರೆಯುವಂತೆ ಮಾಡಬೇಕು. ಶಾಸಕರ ಬಂಧನ ಮಾಡಬಾರದೆಂಬ ನಿಮ್ಮ ಕೆಟ್ಟ ಯೋಚನೆ ಇದರಿಂದ ಬಹಿರಂಗ ಆಗುತ್ತಿದೆ ಎಂದು ಆರೋಪಿಸಿದರು.
7 ಪ್ರಕರಣಗಳನ್ನು ಸಿಬಿಐಗೆ ಕೊಟ್ಟಿದ್ದೇನೆ ಎಂದು ಎದೆ ತಟ್ಟಿಕೊಳ್ಳುವ ಸಿದ್ದರಾಮಯ್ಯನವರು, ಈ ಪ್ರಕರಣವನ್ನೂ ಸಿಬಿಐಗೆ ಕೊಡಲು ಯಾಕೆ ಹಿಂದೇಟು ಹಾಕುತ್ತಿದ್ದಾರೆಂದು ರಾಜ್ಯದ ಜನರಿಗೆ ತಿಳಿಸಬೇಕಾಗಿದೆ ಎಂದು ಆಗ್ರಹಿಸಿದರು. ಅದನ್ನು ಬಿಟ್ಟು ವಿಷಯಾಂತರ ಮಾಡುತ್ತಿರುವುದು ಸರಿಯಲ್ಲ ಎಂದು ತಿಳಿಸಿದರು.
‘ಬಳ್ಳಾರಿ ವಿಚಾರದಲ್ಲಿ ಕ್ರಿಮಿನಲ್ ಶಾಸಕ ನಾ.ರಾ. ಭರತ್ ರೆಡ್ಡಿ, ಐದಾರು ಸಾವಿರ ಜನರ ಜೊತೆಗೆ ನಮ್ಮ ಮನೆಗೆ ಬಂದು ಪೆಟ್ರೋಲ್ ಬಾಂಬ್ ಎಸೆದು, ಗನ್ ಫೈರಿಂಗ್ ಮಾಡುವ ಮೂಲಕ ಒಬ್ಬ ಅಮಾಯಕ ಮೃತಪಟ್ಟಿದ್ದಾರೆ ಎಂದು ಗಮನ ಸೆಳೆದರು. ಇದು ನನ್ನ ಮೇಲಿನ ಕೊಲೆ ಯತ್ನ’ ಎಂದು ತಿಳಿಸಿದರು.
ಬಳ್ಳಾರಿ ಪ್ರಕರಣದ ಸಿಬಿಐ ತನಿಖೆಗೆ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆ ನಿರ್ಣಯ ಮೂಲಕ ಒತ್ತಾಯಿಸಿದೆ. ಬಳ್ಳಾರಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ನಾವು ಸಿಬಿಐ ತನಿಖೆಗೆ ಆಗ್ರಹಿಸಿದ್ದೇವೆ ಎಂದು ವಿವರಿಸಿದರು.