ಗದಗ, ಜ. 19 (DaijiworldNews/TA): ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯ ದಿನದಿಂದ ದಿನಕ್ಕೆ ಹೊಸ ಹೊಸ ರಹಸ್ಯಗಳನ್ನು ಬಹಿರಂಗಪಡಿಸುತ್ತಿದ್ದು, ರಾಜ್ಯದ ಜನರ ಕುತೂಹಲವನ್ನು ಹೆಚ್ಚಿಸುತ್ತಿದೆ. ಗ್ರಾಮದ ಮನೆಯೊಂದರ ಅಡಿಪಾಯ ತೆಗೆಯುವಾಗ ನಿಧಿ ಪತ್ತೆಯಾದ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಉತ್ಖನನ ಕಾರ್ಯ ತೀವ್ರಗೊಂಡಿದ್ದು, ದೇವಸ್ಥಾನಗಳ ಅವಶೇಷಗಳು ಹಾಗೂ ಅಪಾರ ಪ್ರಮಾಣದ ಶಿಲ್ಪಕಲೆಗಳು ಬೆಳಕಿಗೆ ಬರುತ್ತಿವೆ.

ಕೋಟೆ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆಯುತ್ತಿರುವ ಉತ್ಖನನದ ವೇಳೆ, ಪಕ್ಕದಲ್ಲಿದ್ದ ಖಾಸಗಿ ಸಂಸ್ಥೆಯ ಶಾಲೆಯನ್ನು ಜೆಸಿಬಿ ಮೂಲಕ ತೆರವುಗೊಳಿಸುವ ಸಂದರ್ಭದಲ್ಲಿ ಪುರಾತನ ಕಾಲದ ಬೃಹತ್ ಕೋಟೆಗೋಡೆ ಪತ್ತೆಯಾಗಿದೆ. ಈ ಗೋಡೆಯೊಳಗೆ ಹುದುಗಿದ್ದ ಶಿಲ್ಪಗಳು ಹಾಗೂ ಪ್ರಾಚ್ಯವಸ್ತುಗಳು ಲಕ್ಕುಂಡಿಯ ಶ್ರೀಮಂತ ಇತಿಹಾಸ ಮತ್ತು ಕಲಾ ಪರಂಪರೆಯನ್ನು ಮತ್ತೆ ನೆನಪಿಸಿವೆ.
ಉತ್ಖನನ ವೇಳೆ ಬೃಹತ್ ಹಾವು ಕಾಣಿಸಿಕೊಂಡು ಆತಂಕ : ಉತ್ಖನನ ನಡೆಯುತ್ತಿದ್ದ ವೇಳೆ ಕೋಟೆಗೋಡೆಯ ಬಳಿ ಬೃಹತ್ ಗಾತ್ರದ ನಾಗರ ಹಾವು ಕಾಣಿಸಿಕೊಂಡಿದ್ದು, ಕಾರ್ಮಿಕರಲ್ಲಿ ಆತಂಕ ಮೂಡಿಸಿತು. ಈ ಹಿನ್ನೆಲೆ ಸುಮಾರು ಅರ್ಧ ಗಂಟೆಗಳ ಕಾಲ ಉತ್ಖನನ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು. ಅಮವಾಸ್ಯೆಯ ದಿನವೇ ಹಾವು ಕಾಣಿಸಿಕೊಂಡಿರುವುದು, ನಿಧಿ ಇರುವ ಜಾಗದಲ್ಲಿ ಹಾವು ಇರುತ್ತದೆ ಎಂಬ ಗ್ರಾಮಸ್ಥರ ನಂಬಿಕೆಗೆ ಇನ್ನಷ್ಟು ಬಲ ನೀಡಿದಂತಾಗಿದೆ.
ಕೋಟೆಗೋಡೆಯಲ್ಲೇ ಶಿವಲಿಂಗ ಪತ್ತೆ : ಉತ್ಖನನದ ವೇಳೆ ಕೋಟೆಗೋಡೆಯೊಳಗೆ ಪುರಾತನ ಕಾಲದ ಚಿಕ್ಕ ಶಿವಲಿಂಗವೂ ಪತ್ತೆಯಾಗಿದೆ. ಈ ಕೋಟೆಗೋಡೆ ನಿರ್ಮಾಣಕ್ಕೆ ಹಾಳಾದ ದೇವಸ್ಥಾನಗಳ ಶಿಲ್ಪಗಳು ಹಾಗೂ ಸ್ಮಾರಕ ವಸ್ತುಗಳನ್ನು ಬಳಸಿರಬಹುದೆಂದು ಪುರಾತತ್ವ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಚಾಲುಕ್ಯರು, ಹೊಯ್ಸಳರು ಮತ್ತು ವಿಜಯನಗರ ಅರಸರ ಕಾಲದಲ್ಲಿ ಲಕ್ಕುಂಡಿ ಪ್ರಮುಖ ಸಾಂಸ್ಕೃತಿಕ ಹಾಗೂ ಆರ್ಥಿಕ ಕೇಂದ್ರವಾಗಿತ್ತು ಎಂದು ಇತಿಹಾಸ ಹೇಳುತ್ತದೆ.
ಲಕ್ಕುಂಡಿಯಲ್ಲಿ ಪುರಾತನ ವಸ್ತುಗಳ ಪತ್ತೆ ಹೊಸದೇನಲ್ಲ. ಒಂದು ಕಾಲದಲ್ಲಿ ಇಲ್ಲಿ ನಾಣ್ಯಗಳ ತಯಾರಿಕೆ ನಡೆಯುತ್ತಿತ್ತೆಂಬ ದಾಖಲೆಗಳಿದ್ದು, ಅಪಾರ ಸಿರಿ ಸಂಪತ್ತು ಅಡಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉತ್ಖನನ ಸ್ಥಳಕ್ಕೆ ಕರ್ನಾಟಕ ಪುರಾತತ್ವ ಇಲಾಖೆ ಆಯುಕ್ತ ಎ. ದೇವರಾಜು, ನಿರ್ದೇಶಕ ಶೆಜೇಶ್ವರ ಹಾಗೂ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಲಕ್ಕುಂಡಿಯ 91 ವರ್ಷದ ತೋಟಯ್ಯ ಕಾಶಯ್ಯ ಪತ್ರಿಮಠ ಅವರು ಹಲವು ವರ್ಷಗಳಿಂದ ಪಂಚನೀಲ, ಇಂದ್ರನೀಲ, ಹವಳ, ಮುತ್ತು, ಚಿನ್ನ, ವಜ್ರ, ಪಚ್ಚೆ ಹಾಗೂ ಸ್ಫಟಿಕ ನಾಣ್ಯಗಳನ್ನು ಸಂಗ್ರಹಿಸಿಕೊಂಡು ಬಂದಿದ್ದಾರೆ. ಮಳೆಗಾಲದಲ್ಲಿ ಇಂತಹ ರತ್ನಗಳ ಹುಡುಕಾಟ ನಡೆಸುವುದು ತಮ್ಮ ನಿತ್ಯದ ಕೆಲಸವಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಅದೇ ರೀತಿ, ಹಾಲಗುಂಡಿ ಬಸವಣ್ಣ ದೇವಸ್ಥಾನದ ಸಮೀಪದ ಜಮೀನಿನಲ್ಲಿ ಕಳೆದ ನಾಲ್ಕು ದಶಕಗಳಿಂದ ಶೋಧ ಕಾರ್ಯ ನಡೆಸುತ್ತಿರುವ ಬಸಪ್ಪ ಬಡಿಗೇರ ಅವರು ಮುತ್ತು, ಹವಳ, ನೀಲಮಣಿ, ಸ್ಪಟಿಕ ಸೇರಿದಂತೆ ಅನೇಕ ಮೌಲ್ಯಯುತ ವಸ್ತುಗಳನ್ನು ಪತ್ತೆಹಚ್ಚಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ್ದಾರೆ. ಇತ್ತೀಚೆಗೆ ದೊರೆತ ವಸ್ತುಗಳನ್ನೂ ಸರ್ಕಾರಕ್ಕೆ ನೀಡುವುದಾಗಿ ತಿಳಿಸಿದ್ದಾರೆ.
ಉತ್ಖನನದ ನಾಲ್ಕನೇ ದಿನ ಪುರಾತನ ಕಾಲದ ಕೊಡಲಿ ಆಕಾರದ ಶಿಲಾ ಅವಶೇಷವೊಂದು ಮೂರು ಅಡಿ ಆಳದಲ್ಲಿ ಪತ್ತೆಯಾಗಿದೆ. ಮೊದಲ ದಿನ ಶಿವಲಿಂಗ ಪಾಣಿಪೀಠ, ಎರಡನೇ ದಿನ ಶಿವಲಿಂಗ ಹಾಗೂ ನಾಗರ ಚಿತ್ರವಿರುವ ಅವಶೇಷಗಳು ಪತ್ತೆಯಾಗಿದ್ದವು. ಚಾಲುಕ್ಯ ಹಾಗೂ ರಾಷ್ಟ್ರಕೂಟರ ಕಾಲದಲ್ಲಿ ಲಕ್ಕುಂಡಿಯಲ್ಲಿ 101 ದೇವಸ್ಥಾನಗಳು ಮತ್ತು 101 ಬಾವಿಗಳು ಇದ್ದವು ಎಂಬ ಇತಿಹಾಸ ಇದರ ಮಹತ್ವವನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿಗಳ ಪ್ರಕಾರ, ನಾಲ್ಕರಿಂದ ಐದು ಅಡಿ ಆಳದಲ್ಲಿ ಇನ್ನೂ ಮಹತ್ವದ ಅವಶೇಷಗಳು ಪತ್ತೆಯಾಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ, ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯ ಈ ಪ್ರದೇಶದ ಕಲಾ, ಸಂಸ್ಕೃತಿ ಮತ್ತು ಇತಿಹಾಸದ ಶ್ರೀಮಂತಿಕೆಯನ್ನು ಮತ್ತೆ ಜಗತ್ತಿನ ಗಮನಕ್ಕೆ ತರುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಪುರಾತನ ರಹಸ್ಯಗಳು ಬೆಳಕಿಗೆ ಬರುವ ನಿರೀಕ್ಷೆ ಮೂಡಿಸಿದೆ.