ಚೆನ್ನೈ, ಜ. 18 (DaijiworldNews/AA): ಕರೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿಕೆ ಪಕ್ಷದ ಅಧ್ಯಕ್ಷ, ನಟ ವಿಜಯ ದಳಪತಿ ಅವರನ್ನು ಜ.19 ರಂದು ಮತ್ತೊಮ್ಮೆ ದೆಹಲಿಗೆ ಆಗಮಿಸಿ, ವಿಚಾರಣೆ ಹಾಜರಾಗುವಂತೆ ಕೇಂದ್ರ ತನಿಖಾ ದಳ (ಸಿಬಿಐ) ಎರಡನೇ ಬಾರಿಗೆ ಸಮನ್ಸ್ ಜಾರಿಮಾಡಿದೆ.

ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಅಜಯ್ ರಸ್ತೋಗಿ ನೇತೃತ್ವದ ಸಮಿತಿಯು ಕೇಂದ್ರ ತನಿಖಾ ದಳದ ತನಿಖೆಯನ್ನು ಮೇಲ್ವಿಚಾರಣೆ ನಡೆಸುತ್ತಿದೆ. ವಿಚಾರಣೆಯ ಭಾಗವಾಗಿ, ಈಗಾಗಲೇ ಸಿಬಿಐ ಹಲವಾರು ಹಿರಿಯ ಟಿವಿಕೆ ಕಾರ್ಯಕರ್ತರನ್ನು ಪ್ರಶ್ನಿಸಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಬುಸ್ಸಿ ಆನಂದ್, ಚುನಾವಣಾ ನಿರ್ವಹಣಾ ವಿಭಾಗದ ಪ್ರಧಾನ ಕಾರ್ಯದರ್ಶಿ ಅಧವ್ ಅರ್ಜುನ, ಜಂಟಿ ಪ್ರಧಾನ ಕಾರ್ಯದರ್ಶಿ ನಿರ್ಮಲ್ ಕುಮಾರ್ ಮತ್ತು ಕರೂರ್ ಜಿಲ್ಲಾ ಕಾರ್ಯದರ್ಶಿ ಮತಿಯಜಗನ್ ಅವರನ್ನು ಕೂಡ ವಿಚಾರಣೆಗೊಳಪಡಿಸಲಾಗಿದೆ.
ಇನ್ನೂ ಜ.12ರಂದು ಸಿಬಿಐ ವಿಜಯ್ ದಳಪತಿ ಅವರನ್ನು 7 ಗಂಟೆಗೂ ಅಧಿಕ ಕಾಲ ವಿಚಾರಣೆ ನಡೆಸಿತ್ತು. ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಪ್ರಶ್ನಿಸಲಾಗಿತ್ತು. ಸುಮಾರು ಏಳು ತಾಸಿಗೂ ಅಧಿಕ ಕಾಲ ನಿರಂತರವಾಗಿ ಪ್ರಶ್ನೆ ಮಾಡಿದ್ದರು. ಈ ವೇಳೆ ವಿಜಯ್ ಕಾಲ್ತುಳಿತಕ್ಕೆ ತಮ್ಮ ಪಕ್ಷ ಹಾಗೂ ಪಕ್ಷದ ಕಾರ್ಯಕರ್ತರು ಕಾರಣರಲ್ಲ. ಜೊತೆಗೆ ಕಾಲ್ತುಳಿತದ ಬಳಿಕವೂ ನಾನು ಅಲ್ಲೇ ಇರುವುದು ಇನ್ನಷ್ಟು ಜನರಿಗೆ ತೊಂದರೆಯಾಗಬಹುದು ಅಥವಾ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂಬ ಕಾರಣಕ್ಕೆ ನಾನು ಅಲ್ಲಿಂದ ತೆರಳಿದ್ದೆ ಎಂದು ತಿಳಿಸಿದ್ದರು ಎನ್ನಲಾಗಿದೆ.