ಬೆಳಗಾವಿ, ಜ. 16 (DaijiworldNews/AK): ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆ ಬಗ್ಗೆ ಪದೇಪದೇ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಕ್ಕೂಟ ವ್ಯವಸ್ಥೆ ಹಾಳು ಮಾಡುವ ಕುತಂತ್ರ ನಡೆಸುತ್ತಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಾಗ್ದಾಳಿ ನಡೆಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸುಧಾರಣೆಗಳ ಜೊತೆ ಮನ್ ರೇಗಾವನ್ನು ವಿಬಿ ಜಿ ರಾಮ್ ಜಿ ಯೋಜನೆ ಎಂದು ಪರಿವರ್ತಿಸಿ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಜೀ ಅವರು ಜಾರಿಗೊಳಿಸುತ್ತಿದ್ದಾರೆ. ದೇಶದ ಬಡವರು, ಕಾರ್ಮಿಕರಿಗೆ ಅನುಕೂಲ ಆಗಬೇಕೆಂದು ಈ ಕಾಯ್ದೆ ತಂದಿದ್ದಾರೆ. ಇದರ ಕುರಿತು ಚರ್ಚಿಸುವ ನೆಪದಲ್ಲಿ ವಿಶೇಷ ಅಧಿವೇಶನವನ್ನು ಕರೆದು ಬಿಜೆಪಿ ನೇತೃತ್ವದ ಎನ್ಡಿಎ ಸರಕಾರದ ವಿರುದ್ಧ ದ್ವೇಷ ಸಾಧಿಸಲು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಹೊರಟಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಶಾಸನಸಭೆಯ ಪಾವಿತ್ರ್ಯವನ್ನು ಹಾಳು ಮಾಡುವಂಥ ಕೆಲಸಕ್ಕೆ ಸರಕಾರ ಮುಂದಾಗಿದೆ. ಯಾವ ಸದನದಲ್ಲಿ ಈ ನಾಡಿನ ಜನರ ಒಳಿತು, ಯೋಜನೆಗಳು ಹಾಗೂ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಚರ್ಚೆ ಆಗಬೇಕಿತ್ತೋ ಅದನ್ನು ಕೇಂದ್ರ ಸರಕಾರದ ವಿರುದ್ಧ ಜನರನ್ನು ಎತ್ತಿ ಕಟ್ಟುವುದಕ್ಕೆ ಬಳಸುತ್ತಿರುವುದನ್ನು ಬಿಜೆಪಿ ಖಂಡಿಸುತ್ತದೆ ಎಂದು ತಿಳಿಸಿದರು.
ನಾಡಿನ ಹಿತವನ್ನು ಮರೆತು ಪದೇ ಪದೇ ಕೇಂದ್ರ ಸರಕಾರದ ವಿರುದ್ಧ ವಿಷ ಕಾರುವ ರಾಜ್ಯದ ಮುಖ್ಯಮಂತ್ರಿಗಳು, ಈ ರಾಜ್ಯದ ಒಳಿತಿನ ಕುರಿತು ಚಿಂತನೆ ಮಾಡದೇ ಜನರನ್ನು ಎತ್ತಿಕಟ್ಟುವ ಕಾರ್ಯದಲ್ಲಿ ಕಳೆದ ಎರಡೂವರೆ ವರ್ಷ ಕಳೆದಿದ್ದಾರೆ ಎನ್ನುವುದು ಸತ್ಯ ಎಂದು ವಿಶ್ಲೇಷಿಸಿದರು.
ಪ್ರಶ್ನೆಗೆ ಉತ್ತರ ಕೊಟ್ಟ ಅವರು, ಕುಮಾರಸ್ವಾಮಿಯವರು ರಾಜ್ಯ ರಾಜಕಾರಣಕ್ಕೆ ಬರುವುದರಲ್ಲಿ ತಪ್ಪೇನಿದೆ ಎಂದು ಮರುಪ್ರಶ್ನೆ ಹಾಕಿದರು. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ನಾಡಿಗೆ ಅವರದೇ ಆದ ಕೊಡುಗೆ ನೀಡಿದ್ದಾರೆ. ಮತ್ತೆ ರಾಜ್ಯ ರಾಜಕಾರಣಕ್ಕೆ ಬರುವುದಾದರೆ ಅದರಲ್ಲಿ ತಪ್ಪೇನಿದೆ ಎಂದು ಕೇಳಿದರು.
ಕಾಲಹರಣ, ಕುರ್ಚಿ ಉಳಿಸಿಕೊಳ್ಳಲು ಚಾಣಾಕ್ಷ ನಡೆ
ಸಿದ್ದರಾಮಯ್ಯನವರು ಚಾಣಾಕ್ಷ ನಡೆ ಅನುಸರಿಸುತ್ತಿದ್ದಾರೆ ಎಂದು ನನಗೆ ಅನಿಸುತ್ತಿದೆ. ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುವುದು ಒಂದು ಆದ್ಯತೆ ಅವರದ್ದಾಗಿದೆ. ಮತ್ತೊಂದು ಕಡೆ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು, ಕಾಲಹರಣ ಮಾಡಲು, ಡಿ.ಕೆ.ಶಿವಕುಮಾರ್ ರಿಗೆ ಕೈ ಕೊಡಲು ಸದನ- ಅಧಿವೇಶನವನ್ನು ಬಳಸುತ್ತಿದ್ದಾರೆ ಎಂಬುದನ್ನು ರಾಜ್ಯದ ಜನರು ಚರ್ಚೆ ಮಾಡುತ್ತಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಸಾಧನೆ ಕುರಿತಂತೆ ಚರ್ಚೆಗೆ ಬನ್ನಿ
ಮುಖ್ಯಮಂತ್ರಿಗಳೇ ನಿಮ್ಮ ಸರಕಾರ ಬಂದು ಎರಡೂವರೆ ವರ್ಷ ಕಳೆದಿದೆ. 3 ವರ್ಷಕ್ಕೆ ಹತ್ತಿರ ಬರುತ್ತಿದೆ. ನೀವೇನು ಸಾಧನೆ ಮಾಡಿದ್ದೀರಿ? ಜನಪರ ಯೋಜನೆಗಳನ್ನೇನು ಕೊಟ್ಟಿದ್ದೀರಿ? ಏನು ಕಡಿದು ಕಟ್ಟೆ ಹಾಕಿದ್ದೀರಿ ಎಂಬ ಬಗ್ಗೆ ಚರ್ಚಿಸಿದರೆ ಒಳಿತು ಎಂದು ಕಿವಿಮಾತು ಹೇಳಿದರು.