ಬೆಂಗಳೂರು, ಜ. 14 (DaijiworldNews/AA): ಇದೇ ಜ.22ರಿಂದ ಜ.31ರ ತನಕ ಅಧಿವೇಶನ ನಡೆಸಲು ತುರ್ತು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ರಜಾ ದಿನಗಳನ್ನ ಹೊರತುಪಡಿಸಿ ಎಷ್ಟು ದಿನ ಅಧಿವೇಶನ ನಡೆಯಬೇಕು ಎಂಬುದನ್ನ ಸ್ಪೀಕರ್ ತೀರ್ಮಾನಿಸಲಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಮಾಹಿತಿ ನೀಡಿದ್ದಾರೆ.

ಎರಡೂವರೆ ಗಂಟೆಗಳಿಗೂ ಹೆಚ್ಚು ಕಾಲ ನಡೆದ ಸಚಿವ ಸಂಪುಟ ಸಭೆಯಲ್ಲಿ ಮನ್ರೇಗಾ ವರ್ಸಸ್ ವಿಕಸಿತ ಭಾರತ್ ಜಿರಾಮಜಿ ಕಾಯ್ದೆಗಳನ್ನು ಹೋಲಿಕೆ ಮಾಡಿ, ಸುದೀರ್ಘವಾಗಿ ಕ್ಯಾಬಿನೆಟ್ನಲ್ಲಿ ಚರ್ಚಿಸಲಾಗಿದೆ. ಬಳಿಕ ಐವರು ಸಚಿವರಿಗೆ ಮನ್ರೇಗಾ ಸಮರ್ಥನೆಗೆ ಸೂಚಿಸಿದ್ದು, ಹೆಚ್.ಕೆ.ಪಾಟೀಲ್, ಪ್ರಿಯಾಂಕ್ ಖರ್ಗೆ, ಕೃಷ್ಣಬೈರೇಗೌಡ, ಶರಣಪ್ರಕಾಶ್ ಪಾಟೀಲ್, ಲಾಡ್ ಅವರ ತಂಡ ರಚನೆ ಮಾಡಿದ್ದು, ಸದನದಲ್ಲಿ ಕಡ್ಡಾಯ ಹಾಜರಾತಿಗೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.
ಕೇಂದ್ರ ಸರ್ಕಾರದ ವಿರುದ್ಧ ನಿರ್ಣಯಕ್ಕೆ ಸರ್ಕಾರ ತಂತ್ರ ರೂಪಿಸಿದ್ದು, ಕ್ಯಾಬಿನೆಟ್ನಲ್ಲಿ ಸುದೀರ್ಘ ಚರ್ಚೆ ನಡೆದಿದೆ. ಒಟ್ಟಾರೆ ಇವತ್ತಿನ ಕ್ಯಾಬಿನೆಟ್ನಲ್ಲಿ ಮೂರು ನಿರ್ಣಯ ತೆಗೆದುಕೊಂಡಿದ್ದು, ಅಧಿವೇಶನ ದಿನಾಂಕ ಅಂತಿಮಗೊಳಿಸಿದೆ.
ತುರ್ತು ಕ್ಯಾಬಿನೆಟ್ನ ಮೂರು ನಿರ್ಣಯಗಳು:
* ವಿಧಾನಸಭೆ ಜಂಟಿ ಅಧಿವೇಶನವನ್ನ ಜ.22ರ 11 ಗಂಟೆಗೆ ಕರೆಯಲು ಕ್ಯಾಬಿನೆಟ್ ತೀರ್ಮಾನ, ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣ
* ರಾಜ್ಯಪಾಲರ ಜಂಟಿ ಭಾಷಣ ಅನುಮೋದನೆಗೆ ಸಿಎಂ ಪರಮಾಧಿಕಾರ
* ವಿಬಿಜಿ ರಾಮ್ ಜಿ ಕಾಯ್ದೆ 2025 ಸಮಾಜದ ಮೇಲೆ ಬೀರುವ ಪರಿಣಾಮಗಳ ಕುರಿತು ಜಂಟಿ ಅಧಿವೇಶನದಲ್ಲಿ ಚರ್ಚಿಸಿ, ನಿರ್ಣಯಿಸಲು ತೀರ್ಮಾನ.