ಸುಕ್ಮಾ, ಜ. 14 (DaijiworldNews/AA): ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ಗೊಗುಂಡಾ ಪ್ರದೇಶದ ದಂಡಕಾರಣ್ಯ ಆದಿವಾಸಿ ಕಿಸಾನ್ ಮಜದೂರ್ ಸಂಘಟನೆಯ ನಾಯಕ ಪೊಡಿಯಂ ಬುದ್ರಾ ಸೇರಿ 29 ಮಂದಿ ನಕ್ಸಲರು ಶರಣಾಗಿದ್ದಾರೆ.

ಡಿಎಕೆಎಂಎಸ್ ಸದಸ್ಯರು, ಮಿಲಿಷಿಯಾ ಸಿಬ್ಬಂದಿ ಹಾಗೂ ಜನತಾನಾ ಸರ್ಕಾರ್ನ ಕಾರ್ಯಕರ್ತರು ಈ ಗುಂಪಿನಲ್ಲಿದ್ದರು. ಇವರ ಮೇಲೆ 2 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.
"ರಾಜ್ಯ ಸರ್ಕಾರದ ಪೂನಾ ಮಾರ್ಗೆಂ ಯೋಜನೆಯಡಿ ಈ ಶರಣಾಗತಿ ನಡೆದಿದೆ. ಗೊಗುಂಡಾದಲ್ಲಿ ಇತ್ತೀಚೆಗೆ ಸ್ಥಾಪಿಸಲಾದ ಭದ್ರತಾ ಕ್ಯಾಂಪ್ನಿಂದ ತೀವ್ರ ಆ್ಯಂಟಿ-ನಕ್ಸಲ್ ಕಾರ್ಯಾಚರಣೆಗಳು, ಶೋಧ ಕಾರ್ಯಾಚರಣೆಗಳು ನಡೆದಿವೆ. ಇದರಿಂದ ಮಾವೋವಾದಿಗಳ ಬೆಂಬಲ ವ್ಯವಸ್ಥೆ ದುರ್ಬಲಗೊಂಡಿದೆ" ಎಂದು ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚವಾನ್ ತಿಳಿಸಿದ್ದಾರೆ.
"ಗೊಗುಂಡಾದ ದಟ್ಟ ಕಾಡು ಮತ್ತು ದುರ್ಗಮ ಪ್ರದೇಶ ಒಂದು ಕಾಲದಲ್ಲಿ ಮಾವೋವಾದಿಗಳ ದರ್ಭಾ ವಿಭಾಗಕ್ಕೆ ಸುರಕ್ಷಿತ ಆಶ್ರಯವಾಗಿತ್ತು. ಆದರೆ, ಹೊಸ ಭದ್ರತಾ ಕ್ಯಾಂಪ್ನಿಂದ ಒತ್ತಡ ಹೆಚ್ಚಾದ ನಂತರ ಈ ಶರಣಾಗತಿಗಳು ಸಾಧ್ಯವಾಗಿವೆ" ಎಂದು ಅವರು ಮಾಹಿತಿ ನೀಡಿದ್ದಾರೆ.