ಬೆಂಗಳೂರು,ಜ. 13 (DaijiworldNews/AK): ಬಿಜೆಪಿ ಎಸ್ಐಆರ್ ಕಡೆ ಹೆಚ್ಚಿನ ಗಮನ ಕೊಡಲಿದೆ; ಅಲ್ಲದೇ ಮುಂದಿನ ದಿನಗಳಲ್ಲಿ ವಿಬಿ ಜಿ ರಾಮ್ ಜಿ ಕುರಿತು ಜಾಗೃತಿ ಮೂಡಿಸಲು ಮುಂದಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ 5ನೇ ತಾರೀಕಿನಿಂದ ಬೆಂಗಳೂರಿನಲ್ಲಿ ನಮ್ಮೆಲ್ಲ ವಿವಿಧ ಜಿಲ್ಲೆಗಳ ಸಭೆಗಳನ್ನು ಮಾಡುತ್ತಿದ್ದೇವೆ. ರಾಜ್ಯದ 39 ಸಂಘಟನಾತ್ಮಕ ಜಿಲ್ಲೆಗಳ ಸರಣಿ ಸಭೆ ನಡೆಸಲಾಗಿದೆ. ಇವತ್ತಿಗೆ ಬಹುತೇಕ 35 ಜಿಲ್ಲೆಗಳ ಸಭೆ ಪೂರ್ಣಗೊಳ್ಳುತ್ತಿದೆ ಎಂದು ವಿವರಿಸಿದರು.
ಸಂಘಟನಾತ್ಮಕ ಸಭೆಯಲ್ಲಿ ಜಿಲ್ಲಾ ರಾಜಕೀಯ ಸ್ಥಿತಿಗತಿಗಳು, ನಮ್ಮ ಸಂಘಟನೆಯ ಪರಿಸ್ಥಿತಿ ಏನಿದೆ? ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಯಾವ ರೀತಿ ಪಕ್ಷವನ್ನು ಸದೃಢವಾಗಿ ಮುಂದಕ್ಕೆ ಒಯ್ಯುವ ಕುರಿತು ಚರ್ಚಿಸಲಾಗಿದೆ. ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್ಐಆರ್) ಕುರಿತ ಕೇಂದ್ರ ಚುನಾವಣಾ ಆಯೋಗದ ನಿರ್ಣಯವನ್ನು ಪಕ್ಷ ಸ್ವಾಗತಿಸಿದೆ. ರಾಜ್ಯದಲ್ಲಿ ಫೆಬ್ರವರಿ ಅಥವಾ ನಂತರದ ದಿನಗಳಲ್ಲಿ ಎಸ್ಐಆರ್ ನಡೆಯುವಾಗ ಬಿಜೆಪಿ ಇದರತ್ತ ಹೆಚ್ಚಿನ ಗಮನ ಕೊಡಲಿದೆ ಎಂದು ತಿಳಿಸಿದರು.
ಬಿಹಾರ ರಾಜ್ಯದ ಚುನಾವಣೆ ಮೇಲೆ ಯಾವ ರೀತಿ ಪರಿಣಾಮ ಬೀರಿದೆ. ಪಟ್ಟಿಯಲ್ಲಿ ಸೇರಿದ್ದ 65 ಲಕ್ಷಕ್ಕೂ ಹೆಚ್ಚು ನಕಲಿ ಮತದಾರರ ಹೆಸರನ್ನು ಅಲ್ಲಿನ ಚುನಾವಣಾ ಆಯೋಗ ಕೈಬಿಟ್ಟಿರುವುದು, ಉತ್ತರ ಪ್ರದೇಶದಲ್ಲಿ 2.5 ಕೋಟಿಗೂ ಹೆಚ್ಚು ನಕಲಿ ಮತದಾರರನ್ನು ಕೈಬಿಡಲಾಗಿದೆ ಎಂದು ಗಮನ ಸೆಳೆದರು.
ವಿಬಿ ಜಿ ರಾಮ್ ಜಿ ಕುರಿತು ಕಾಂಗ್ರೆಸ್ಸಿನವರು ಅಪಪ್ರಚಾರ ನಿರತರಾಗಿದ್ದಾರೆ. ನಮ್ಮ ರಾಜ್ಯದ ಕಾಂಗ್ರೆಸ್ ಸರಕಾರ ಹತಾಶ ಸ್ಥಿತಿಯಲ್ಲಿದೆ. ಗ್ಯಾರಂಟಿಯ ಭ್ರಮೆಯಲ್ಲಿದ್ದ ರಾಜ್ಯ ಸರಕಾರಕ್ಕೆ ಸತ್ಯದ ಅರಿವಾಗುತ್ತಿದೆ. ರಾಜ್ಯದಲ್ಲಿ ವಾತಾವರಣ ದಿನೇದಿನೇ ಈ ಸರಕಾರದ ವಿರುದ್ಧ ತಿರುಗುತ್ತಿದೆ. ಇದರ ಅರಿವಾದ ಬಳಿಕ ಕಾಂಗ್ರೆಸ್ ಪಕ್ಷವು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಮುಂದೂಡಿ, ಮನ್ ರೇಗಾದಲ್ಲಿ ಗಾಂಧೀಜಿ ಅವರನ್ನು ಕೇಂದ್ರದ ಎನ್ಡಿಎ ಸರಕಾರ ಎರಡನೇ ಬಾರಿಗೆ ಕಗ್ಗೊಲೆ ಮಾಡಿದೆ ಎಂದು ರಾಹುಲ್ ಗಾಂಧಿ, ಸಿದ್ದರಾಮಯ್ಯನವರು ಅಪಪ್ರಚಾರ ಮಾಡಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದರು. ಇದರ ವಿರುದ್ಧ ಜಿಲ್ಲಾ ಕೇಂದ್ರಗಳು- ಗ್ರಾಮೀಣ ಮಟ್ಟದಲ್ಲಿ ಜಾಗೃತಿ ಕಾರ್ಯವನ್ನು ಯಶಸ್ವಿಯಾಗಿ ಮಾಡಲು ಜಿಲ್ಲಾ ಸಭೆಗಳಲ್ಲಿ ತಿಳಿಸಿದ್ದೇವೆ ಎಂದು ವಿವರಿಸಿದರು.