ನವದೆಹಲಿ, ಜ. 13 (DaijiworldNews/AA): ಖ್ಯಾತ ತಮಿಳು ನಟ ಮತ್ತು ರಾಜಕಾರಣಿ ವಿಜಯ್ ಅಭಿನಯದ ಜನ ನಾಯಗನ್ ಚಿತ್ರವನ್ನು ತಡೆಯಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನಡೆಸುತ್ತಿರುವ ಪ್ರಯತ್ನ "ತಮಿಳು ಸಂಸ್ಕೃತಿ ಮೇಲಿನ ದಾಳಿ" ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಜನ ನಾಯಗನ್ಗೆ ಸೆನ್ಸಾರ್ ಪ್ರಮಾಣಪತ್ರ ನೀಡದ ಕುರಿತ ಎಕ್ಸ್ ನಲ್ಲಿ ಮಂಗಳವಾರ ಪೋಸ್ಟ್ ಮಾಡಿರುವ ಅವರು, "ಪ್ರಧಾನಿ ನರೇಂದ್ರ ಮೋದಿ 'ತಮಿಳು ಜನರ ಧ್ವನಿಯನ್ನು ಅಡಗಿಸುವಲ್ಲಿ' ಯಶಸ್ವಿಯಾಗುವುದಿಲ್ಲ. ಜನ ನಾಯಗನ್ ಚಿತ್ರವನ್ನು ನಿರ್ಬಂಧಿಸಲು ಮಾಹಿತಿ & ಪ್ರಸಾರ ಸಚಿವಾಲಯದ ಪ್ರಯತ್ನವು ತಮಿಳು ಸಂಸ್ಕೃತಿಯ ಮೇಲಿನ ದಾಳಿಯಾಗಿದೆ. ಮೋದಿ, ತಮಿಳು ಜನರ ಧ್ವನಿ ಅಡಗಿಸುವಲ್ಲಿ ನೀವು ಎಂದಿಗೂ ಯಶಸ್ವಿಯಾಗುವುದಿಲ್ಲ" ಎಂದು ಕಿಡಿಕಾರಿದ್ದಾರೆ.
ಜನವರಿ 9 ರಂದು, ಜನ ನಾಯಗನ್ಗೆ ಸೆನ್ಸಾರ್ ಪ್ರಮಾಣಪತ್ರವನ್ನು ತಕ್ಷಣವೇ ನೀಡಬೇಕೆಂದು ಸಿಬಿಎಫ್ಸಿಗೆ ನಿರ್ದೇಶಿಸಿದ್ದ ಮದ್ರಾಸ್ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶವನ್ನು ಮದ್ರಾಸ್ ಹೈಕೋರ್ಟ್ ವಿಭಾಗೀಯ ಪೀಠ ತಡೆಹಿಡಿದಿದೆ. ಆದರೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್ಸಿ) ಪ್ರಮಾಣೀಕರಣವನ್ನು ನೀಡದ ಕಾರಣ ಚಿತ್ರತಂಡ ಸಂಕಷ್ಟ ಎದುರಿಸುವಂತಾಗಿದೆ.