ನವದೆಹಲಿ, ಜ. 09 (DaijiworldNews/TA): ಭಯೋತ್ಪಾದಕ ಮೂಲಸೌಕರ್ಯ ಮತ್ತು ಭಯೋತ್ಪಾದಕ ಹಣಕಾಸು ಜಾಲಗಳನ್ನು ಸಂಪೂರ್ಣವಾಗಿ ನಾಶಪಡಿಸುವ ಉದ್ದೇಶದಿಂದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳನ್ನು “ಮಿಷನ್ ಮೋಡ್”ನಲ್ಲಿ ಮುಂದುವರಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಸಾಧ್ಯವಾದಷ್ಟು ಬೇಗ “ಭಯೋತ್ಪಾದನಾ ಮುಕ್ತ ಜಮ್ಮು ಮತ್ತು ಕಾಶ್ಮೀರ” ಗುರಿ ಸಾಧಿಸಲು ಅಗತ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಲಭ್ಯವಾಗುವಂತೆ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.

ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಮಿತ್ ಶಾ, 370ನೇ ವಿಧಿ ರದ್ದುಪಡಿಸಿದ ಬಳಿಕ ಸಾಧಿಸಿದ ಭದ್ರತಾ ಲಾಭಗಳನ್ನು ನಿರಂತರವಾಗಿ ಕಾಯ್ದುಕೊಳ್ಳಲು ಎಲ್ಲಾ ಭದ್ರತಾ ಸಂಸ್ಥೆಗಳು ಪರಸ್ಪರ ಸಮನ್ವಯದೊಂದಿಗೆ (ಸಿನರ್ಜಿಯಲ್ಲಿ) ಕಾರ್ಯನಿರ್ವಹಿಸಬೇಕೆಂದು ಸೂಚಿಸಿದರು. ಈ ನಿಟ್ಟಿನಲ್ಲಿ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.
ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್, ಗುಪ್ತಚರ ಬ್ಯೂರೋ ನಿರ್ದೇಶಕ ತಪನ್ ಕುಮಾರ್ ದೇಕಾ, ಕೇಂದ್ರಾಡಳಿತ ಪ್ರದೇಶದ ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿಪಿ, ಜೊತೆಗೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (CAPF) ಮುಖ್ಯಸ್ಥರು ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಜಮ್ಮು ಮತ್ತು ಕಾಶ್ಮೀರದ ಭದ್ರತಾ ಸನ್ನಿವೇಶವನ್ನು ಬಲಪಡಿಸಲು ಭದ್ರತಾ ಪಡೆಗಳು ಕೈಗೊಂಡಿರುವ ಕ್ರಮಗಳನ್ನು ಶ್ಲಾಘಿಸಿದ ಅಮಿತ್ ಶಾ, ಭಯೋತ್ಪಾದಕ ಮೂಲಸೌಕರ್ಯ ಹಾಗೂ ಹಣಕಾಸು ಮೂಲಗಳ ಮೇಲೆ ಕೇಂದ್ರೀಕೃತ ಕಾರ್ಯಾಚರಣೆಗಳು ನಿರಂತರವಾಗಿ, ತೀವ್ರವಾಗಿ ನಡೆಯಬೇಕು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸರ್ಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಶ್ವತ ಶಾಂತಿ ಸ್ಥಾಪನೆ ಮತ್ತು ಭಯೋತ್ಪಾದನೆಯ ಸಂಪೂರ್ಣ ನಿರ್ಮೂಲನೆಗೆ ಬದ್ಧವಾಗಿದೆ ಎಂದು ಶಾ ತಿಳಿಸಿದರು. ಭಯೋತ್ಪಾದನೆಯ ವಿರುದ್ಧ ಸರ್ಕಾರದ ಶೂನ್ಯ ಸಹಿಷ್ಣುತಾ ನೀತಿ ಮುಂದುವರಿಯುತ್ತದೆ ಎಂದು ಪುನರುಚ್ಚರಿಸಿದರು.
ಮೋದಿ ಸರ್ಕಾರದ ನಿರಂತರ, ಸಂಘಟಿತ ಹಾಗೂ ಪರಿಣಾಮಕಾರಿ ಕ್ರಮಗಳಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಪರಿಸರ ವ್ಯವಸ್ಥೆ ಗಣನೀಯವಾಗಿ ದುರ್ಬಲಗೊಂಡಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.