ಬೆಳಗಾವಿ, ಜ. 08 (DaijiworldNews/AA): ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಕುಂಬಿ ಗ್ರಾಮದ ಬಳಿಯ ಸಕ್ಕರೆ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಬಾಯ್ಲರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಫಲಿಸದೆ ಇಂದು ಒಂದೇ ದಿನ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಕುಂಬಿ ಗ್ರಾಮದ ಬಳಿಯ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ಬಾಯ್ಲರ್ ಸ್ಫೋಟಗೊಂಡು ಎಂಟು ಜನರಲ್ಲಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ದರು. ಬುಧವಾರ ಕಾರ್ಖಾನೆ ವಾಲ್ ದುರಸ್ತಿ ಮಾಡುವಾಗ ವಾಲ್ ಸ್ಫೋಟಗೊಂಡು ಕುದಿಯುವ ಕಬ್ಬಿನ ಹಾಲು ಕಾರ್ಮಿಕರ ಮೈಮೇಲೆ ಬಿದ್ದಿತ್ತು. ಗಂಭೀರವಾಗಿ ಗಾಯಗೊಂಡವರನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಿಸದೆ ಒಬ್ಬೊಬ್ಬರೇ ಕಾರ್ಮಿಕರು ಮೃತಪಟ್ಟಿದ್ದಾರೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಮೃತ ಕಾರ್ಮಿಕರ ಕುಟುಂಬಸ್ಥರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಕಾರ್ಖಾನೆ ಸ್ಪಂದಿಸುತ್ತಿಲ್ಲ, ಸರ್ಕಾರ ಕೂಡ ಯಾವುದೇ ಪರಿಹಾರ ನೀಡಿಲ್ಲ ಎಂದು ಸರ್ಕಾರ ಹಾಗೂ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಈ ಘಟನೆ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.