ಶ್ರೀನಗರ, ಜ. 08 (DaijiworldNews/AA): ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಪೊಲೀಸರು ಮತ್ತು ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆ ವೇಳೆ ಸುಮಾರು 4 ಕೆ.ಜಿ.ಯಷ್ಟು ಐಇಡಿ ನಿಷ್ಕ್ರಿಯಗೊಳಿಸಲಾಗಿದ್ದು, ಸಂಭವನೀಯ ದೊಡ್ಡ ದಾಳಿಯನ್ನ ತಪ್ಪಿಸಿದಂತಾಗಿದೆ.

ಗುಪ್ತಚರ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡಿದ್ದ ಸೇನೆ ಮತ್ತು ಪೊಲೀಸರು ಅರಣ್ಯ ಪ್ರದೇಶವನ್ನ ತೀವ್ರವಾಗಿ ಶೋಧಿಸಿದ್ದರು. ಈ ವೇಳೆ ಸ್ಫೋಟಕ್ಕೆ ಇಟ್ಟಿದ್ದ 4 ಕೆಜಿ ಐಇಡಿ ಯನ್ನ ಜಪ್ತಿ ಮಾಡಿದ್ದು, ಹೆಚ್ಚುವರಿ ಸಾಕ್ಷ್ಯಗಳನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಮೂಲಕ ಭಯೋತ್ಪಾದಕರ ಸಂಚನ್ನು ವಿಫಲಗೊಳಿಸಲಾಗಿದೆ.
ಥನಮಂಡಿ ತಹಸಿಲ್ನ ಡೋರಿ ಮಾಲ್ನಲ್ಲಿರುವ ಕಲ್ಲಾರ್ನ ದಟ್ಟ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಹಾಗೂ ಪೊಲೀಸರು ಬುಧವಾರದಿಂದಲೇ ಕಾರ್ಯಾಚರಣೆ ಕೈಗೊಂಡಿದ್ದರು. ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿದ್ದ ಬಗ್ಗೆ ಗುಪ್ತಚರ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಈ ವೇಳೆ ಬಂಡೆಗಳ ಸಂದಿನಲ್ಲಿ ಅನುಮಾನಾಸ್ಪದ ವಸ್ತುಗಳು ಕಂಡುಬಂದವು. ಪರಿಶೀಲಿಸಿದಾಗ ಅದರಲ್ಲಿ ಸುಮಾರು 4 ಕೆಜಿ ತೂಕದ ಅತ್ಯಾಧುನಿಕ ಸುಧಾರಿತ ಸ್ಫೋಟಕ ಸಾಧನಗಳಿರುವುದು ಕಂಡುಬಂದಿದೆ.
ಸದ್ಯ ಐಇಡಿ ವಶಕ್ಕೆ ಪಡೆದಿರುವ ಭದ್ರತಾ ಪಡೆಗಳು ವಿಧಿವಿಜ್ಞಾನ ವಿಶ್ಲೇಷಣೆಗಾಗಿ ರವಾನಿಸಿವೆ. ಈ ಬಗ್ಗೆ ಕಾರ್ಯಾಚರಣೆ ಮುಂದುವರಿದಿದೆ.