ಮುಂಬೈ, ಜ. 08 (DaijiworldNews/AA): ಪಶ್ಚಿಮ ಘಟ್ಟಗಳ ಸಂರಕ್ಷಣಾ ವರದಿಯನ್ನು ರಚಿಸಿದ್ದ ಹಿರಿಯ ಪರಿಸರ ವಿಜ್ಞಾನಿ, ಪರಿಸರವಾದಿ ಮತ್ತು ಬರಹಗಾರ ಡಾ. ಮಾಧವ ಗಾಡ್ಗೀಳ್ (83) ಪುಣೆಯ ತಮ್ಮ ನಿವಾಸದಲ್ಲಿ ಬುಧವಾರ ರಾತ್ರಿ ವಿಧಿವಶರಾಗಿದ್ದಾರೆ.

ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಧವ ಗಾಡ್ಗೀಳ್ ಅವರು, ಪಶ್ಚಿಮ ಘಟ್ಟಗಳು ಹಾಗೂ ಪರಿಸರ ಸಂರಕ್ಷಣೆಗೆ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರು ಐದು ದಶಕಗಳಿಗೂ ಹೆಚ್ಚು ಕಾಲ ಭಾರತದ ಪರಿಸರ ಚಿಂತನೆ, ಸಂರಕ್ಷಣಾ ನೀತಿಗಳನ್ನು ರೂಪಿಸಿದ್ದರು.
1942 ರ ಮೇ 24 ರಂದು ಪುಣೆಯಲ್ಲಿ ಜನಿಸಿದ ಅವರು, ಪುಣೆಯ ಫರ್ಗುಸನ್ ಕಾಲೇಜಿನಿಂದ ಬಿಎಸ್ಸಿ (ಪ್ರಾಣಿಶಾಸ್ತ್ರ) ಪದವಿ ಪಡೆದಿದ್ದರು. 1965 ರಲ್ಲಿ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಎಂಎಸ್ಸಿ ಪದವಿ ಗಳಿಸಿದ್ದರು. 1969 ರಲ್ಲಿ ಹಾರ್ವರ್ಡ್ನಿಂದ ಜೀವಶಾಸ್ತ್ರದಲ್ಲಿ ಪಿಹೆಚ್ಡಿ ಪದವಿ ಪಡೆದಿದ್ದರು.
1971 ರಲ್ಲಿ ಭಾರತಕ್ಕೆ ಮರಳಿದ ಅವರು, 1973 ರಲ್ಲಿ ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯನ್ನು ಸೇರಿ 2004 ರಲ್ಲಿ ಅಧ್ಯಕ್ಷರಾಗುವ ಮೂಲಕ ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಮಾಧವ ಗಾಡ್ಗೀಳ್ ಅವರು ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹಾ ಮಂಡಳಿಯ ಮಾಜಿ ಸದಸ್ಯರಾಗಿದ್ದರು.
ಇನ್ನು ಡಾ. ಮಾಧವ ಗಾಡ್ಗೀಳ್ ಅವರು 2010 ರ ಪಶ್ಚಿಮ ಘಟ್ಟಗಳ ಪರಿಸರ ವಿಜ್ಞಾನ ತಜ್ಞರ ಸಮಿತಿ ಮುಖ್ಯಸ್ಥರಾಗಿದ್ದರು. ಅವರು ಅಧ್ಯಯನ ನಡೆಸಿ ತಯಾರಿಸಿದ್ದ ವರದಿಯನ್ನು ಗಾಡ್ಗೀಳ್ ಆಯೋಗದ ವರದಿ ಎಂದೇ ಖ್ಯಾತಿ ಗಳಿಸಿತ್ತು. ಅವರು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ ಸದಸ್ಯರಾಗಿ ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸದಸ್ಯರಾಗಿ ಮತ್ತು ರಾಷ್ಟ್ರೀಯ ಸಲಹಾ ಮಂಡಳಿಯ ಸದಸ್ಯರಾಗಿ ಹೀಗೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ.
ಜೊತೆಗೆ ಉತ್ತಮ ಕ್ರೀಡಾ ಪಟುವಾಗಿದ್ದ ಮಾಧವ ಗಾಡ್ಗೀಳ್ 1959 ಮತ್ತು 1961 ರಲ್ಲಿ ಮಹಾರಾಷ್ಟ್ರ ರಾಜ್ಯ ಜೂನಿಯರ್ ಮತ್ತು ಪುಣೆ ವಿಶ್ವವಿದ್ಯಾಲಯದ ಹೈಜಂಪ್ನಲ್ಲಿ ದಾಖಲೆ ನಿರ್ಮಿಸಿದ್ದರು. ಅವರು ಅಖಿಲ ಭಾರತ ವಿಶ್ವವಿದ್ಯಾಲಯದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಪುಣೆ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದರು.