ನವದೆಹಲಿ, ಜ. 07 (DaijiworldNews/AA): ಮಹಾರಾಷ್ಟ್ರದ ಅಂಬರ್ನಾಥ್ನಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ಪಕ್ಷದ 12 ಸದಸ್ಯರನ್ನು ಕಾಂಗ್ರೆಸ್ ಇಂದು ಅಮಾನತುಗೊಳಿಸಿದೆ. ಈ ಮೈತ್ರಿಯು ಕಾಂಗ್ರೆಸ್ ಪಕ್ಷಕ್ಕೆ ಮುಜುಗರವನ್ನುಂಟುಮಾಡಿತ್ತು. ಈ ಹಿನ್ನೆಲೆ ಇದೀಗ ಕಾಂಗ್ರೆಸ್ ಕಠಿಣ ಕ್ರಮ ಕೈಗೊಂಡಿದೆ.

ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಗಣೇಶ್ ಪಾಟೀಲ್ ಅವರು ಅಂಬರ್ನಾಥ್ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಪ್ರದೀಪ್ ಪಾಟೀಲ್ ಅವರಿಗೆ ಪತ್ರ ಬರೆದು, ರಾಜ್ಯ ನಾಯಕರ ಅರಿವಿಗೆ ಬಾರದೆ ಅಥವಾ ಅನುಮೋದನೆಯಿಲ್ಲದೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಕ್ಕಾಗಿ 12 ಸದಸ್ಯರನ್ನು ಅಮಾನತುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್ ತನ್ನದೇ ಆದ ಚಿಹ್ನೆಯ ಮೇಲೆ ನಾಗರಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಅಂಬರ್ನಾಥ್ ಪುರಸಭೆಯಲ್ಲಿ 12 ಸ್ಥಾನಗಳನ್ನು ಪಡೆದುಕೊಂಡಿದೆ. ಆದರೆ ಬಿಜೆಪಿಯೊಂದಿಗೆ ಕೈಜೋಡಿಸುವ ನಿರ್ಧಾರವು ಮಾಧ್ಯಮ ವರದಿಗಳ ಮೂಲಕವೇ ಗೊತ್ತಾಯಿತು. ಹೀಗಾಗಿ, ತಮ್ಮ ಗಮನಕ್ಕೆ ಬಾರದೆ ಈ ಮೈತ್ರಿ ಮಾಡಿಕೊಂಡಿದ್ದರಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್ ಅವರ ಸೂಚನೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪತ್ರದಲ್ಲಿ ಗಣೇಶ್ ಪಾಟೀಲ್ ತಿಳಿಸಿದ್ದಾರೆ.
"ನಾವು ಕಾಂಗ್ರೆಸ್ ಗುರುತಿನ ಮೇಲೆ ಚುನಾವಣೆಗಳನ್ನು ಎದುರಿಸಿದ್ದೇವೆ ಮತ್ತು 12 ಸ್ಥಾನಗಳನ್ನು ಗೆದ್ದಿದ್ದೇವೆ. ಆದರೆ, ರಾಜ್ಯ ನಾಯಕತ್ವ ಅಥವಾ ರಾಜ್ಯ ಕಚೇರಿಗೆ ತಿಳಿಸದೆ ನೀವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದೀರಿ. ಇದು ಒಳ್ಳೆಯದಲ್ಲ. ಹೀಗಾಗಿ ರಾಜ್ಯ ಅಧ್ಯಕ್ಷರ ಸೂಚನೆಯಂತೆ ನಿಮ್ಮನ್ನು ಪಕ್ಷದಿಂದ ಅಮಾನತುಗೊಳಿಸಲಾಗುತ್ತಿದೆ" ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.