ಬೆಂಗಳೂರು,ಜ. 06 (DaijiworldNews/AK): ಬಳ್ಳಾರಿಯಲ್ಲಿ ಬ್ಯಾನರ್ ವಿಚಾರವಾಗಿ ಫೈರಿಂಗ್ ಪ್ರಕರಣ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದರ ನಡುವೆ ಬಳ್ಳಾರಿಗೆ ಇಂದು ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿದ್ದು, ಶಾಂತಿಮಂತ್ರ ಜಪಿಸಿದ್ದಾರೆ.

ಬ್ಯಾನರ್ ಗಲಾಟೆಯಿಂದ ಧಗಧಗಿಸಿದ್ದ ಬಳ್ಳಾರಿ ಸದ್ಯ ಸಹಜಸ್ಥಿತಿಗೆ ಮರಳಿದೆ. ಅದೇ ಬಳ್ಳಾರಿಗೆ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಕೆ ಶಿವಕುಮಾರ್ ಭೇಟಿ ನೀಡಿದ್ದರು. ಗಲಾಟೆಯಲ್ಲಿ ಫೈರಿಂಗ್ಗೆ ಬಲಿ ಆಗಿರುವ ರಾಜಶೇಖರ್ ಮನೆಗೆ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಶಾಂತಿ ಕಾಪಾಡಬೇಕು. ಅಸೂಯೆಯಿಂದ ನಮ್ಮ ಕಾರ್ಯಕ್ರಮ ತಡೆಯಲು ಯತ್ನಿಸಿದ್ದಾರೆ. ಕಾರ್ಯಕ್ರಮದ ಬ್ಯಾನರ್ ಕಿತ್ತಾಕಿದ್ದಕ್ಕೆ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ನಮ್ಮ ಶಾಸಕ ತಡವಾಗಿ ಬಂದಿದ್ದಾರೆ. ಭರತ್ ರೆಡ್ಡಿ ಹೊಸ ಶಾಸಕ, ಬಿಸಿ ರಕ್ತ ಮಾತಾಡಿರಬಹುದು. ಬಳ್ಳಾರಿಯಲ್ಲಿ ಶಾಂತಿ ಕಾಪಾಡಲು ಎಲ್ಲ ಪ್ರಯತ್ನ ಮಾಡಿದ್ದೇವೆ. ನಮ್ಮವರು ತಪ್ಪು ಮಾಡಿದರೆ ಖಂಡಿತ ತಪ್ಪು ಅಂತಾ ಹೇಳುತ್ತೇವೆ ಎಂದರು.