ಆಂಧ್ರಪ್ರದೇಶ, ಜ. 05 (DaijiworldNews/TA): ಕೊನಸೀಮಾ ಜಿಲ್ಲೆಯಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ಪೈಪ್ಲೈನ್ನಿಂದ ಭಾರಿ ಪ್ರಮಾಣದ ಅನಿಲ ಸೋರಿಕೆಯಾಗಿ, ಅದಕ್ಕೆ ಬೆಂಕಿ ಹೊತ್ತಿಕೊಂಡ ಘಟನೆ ಭಾನುವಾರ ಸಂಭವಿಸಿದೆ.

ಮಾಲಿಕಿಪುರಂ ಮಂಡಲದ ಇರುಸಮಂಡ ಗ್ರಾಮದ ಸಮೀಪ ಈ ಅವಘಡ ನಡೆದಿದ್ದು, ಬೆಂಕಿಯಿಂದ ಉಂಟಾದ ದಟ್ಟ ಹೊಗೆ ಇಡೀ ಗ್ರಾಮವನ್ನು ಆವರಿಸಿದೆ. ಪರಿಣಾಮವಾಗಿ, ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ, ಗ್ರಾಮಸ್ಥರನ್ನು ಮನೆಗಳಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯವನ್ನು ಅಧಿಕಾರಿಗಳು ಆರಂಭಿಸಿದ್ದಾರೆ. ಅಗ್ನಿಶಾಮಕ ದಳ ಹಾಗೂ ONGC ತಾಂತ್ರಿಕ ತಂಡಗಳು ಸ್ಥಳಕ್ಕೆ ಧಾವಿಸಿ ಅನಿಲ ಸೋರಿಕೆ ನಿಯಂತ್ರಣಕ್ಕೆ ಕ್ರಮ ಕೈಗೊಂಡಿವೆ.
ಈ ಘಟನೆ ಕುರಿತು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ತನಿಖೆಗೆ ಆದೇಶಿಸಿದ್ದು, ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅನಿಲ ಸೋರಿಕೆಯ ನಿಖರ ಕಾರಣ ಇನ್ನಷ್ಟೇ ಪತ್ತೆಯಾಗಬೇಕಿದ್ದು, ತನಿಖೆ ಮುಂದುವರಿದಿದೆ.