National
ಹೊಸವರ್ಷ ಜನವರಿಯೇ,ಯುಗಾದಿಯೇ? - ಗ್ರೆಗೊರಿಯನ್ ಕ್ಯಾಲೆಂಡರ್ ಹಿಂದೊಂದು ದೈವಿಕ ನಾಗರಿಕತೆ ಕಥೆ!
- Mon, Jan 05 2026 04:45:46 PM
-
ನವದೆಹಲಿ, ಜ. 05 (DaijiworldNews/TA): ಹೊಸವರ್ಷ ಎಂದಕೂಡಲೇ ಪ್ರತಿ ವರ್ಷ ಒಂದೇ ವಾದ ಮುನ್ನೆಲೆಗೆ ಬರುತ್ತದೆ. “ಜನವರಿ ಪ್ರಾರಂಭ–ಡಿಸೆಂಬರ್ ಅಂತ್ಯದ ಲೆಕ್ಕಾಚಾರವೆಲ್ಲ ಪಾಶ್ಚಾತ್ಯ ಇಂಗ್ಲಿಷ್ ವ್ಯವಸ್ಥೆ. ಅದನ್ನು ಆಚರಿಸುವುದೇ ಗುಲಾಮಗಿರಿತನ” ಎಂಬ ಆಕ್ಷೇಪದಿಂದ ಹಿಡಿದು, ಯುಗಾದಿಯೇ ನಮ್ಮ ನಿಜವಾದ ಹೊಸವರ್ಷ, ಜನವರಿಗೆ ಹೊಸತನ ಎನ್ನುವ ಯಾವ ಅರ್ಹತೆಯೂ ಇಲ್ಲ ಎಂಬ ತರ್ಕಗಳವರೆಗೂ ಸಾಮಾಜಿಕ ಜಾಲತಾಣಗಳಲ್ಲಿ ಸುದೀರ್ಘ ಚರ್ಚೆಗಳು ನಡೆಯುತ್ತವೆ. ನಮ್ಮದು ಪಂಚಾಂಗ, ಅದು ಗ್ರೆಗೊರಿಯನ್ ಕ್ಯಾಲೆಂಡರ್ ಎಂಬ ನೆನಪಿನ ಸಂದೇಶಗಳು ವರ್ಷಾರಂಭದಲ್ಲಿ ಮತ್ತೆ ಮತ್ತೆ ಹರಿದಾಡುತ್ತವೆ.

ಸಾಂಪ್ರದಾಯಿಕ ದೃಷ್ಟಿಕೋನದ ಅರಿವು, ಅದರ ಹಿಂದಿನ ತತ್ತ್ವ ಮತ್ತು ಲಾಜಿಕ್ ತಿಳಿದುಕೊಳ್ಳುವುದು ಖಂಡಿತ ಅಗತ್ಯ. ಆದರೆ ವರ್ಷಪೂರ್ತಿ ವ್ಯಾವಹಾರಿಕ ಬದುಕಿಗೆ ನಾವು ಬಳಸುತ್ತಿರುವ ಪಾಶ್ಚಾತ್ಯ ಕ್ಯಾಲೆಂಡರ್ ಬದಲಾಗುವ ಕ್ಷಣದಲ್ಲಿ ಜನ ಹೊಸ ಸಂಕಲ್ಪಗಳನ್ನು ಮಾಡಿಕೊಳ್ಳುವುದರಲ್ಲಿ, ಹೊಸ ಭರವಸೆಗಳೊಂದಿಗೆ ಸಂಭ್ರಮಿಸುವುದರಲ್ಲಿ ತಪ್ಪೇನಿದೆ? ನಾವು “ಇಂಗ್ಲಿಷರ ಕ್ಯಾಲೆಂಡರ್” ಅಥವಾ “ಕ್ರೈಸ್ತ ಕ್ಯಾಲೆಂಡರ್” ಎಂದು ಕರೆಯುವ ವ್ಯವಸ್ಥೆ ವಾಸ್ತವದಲ್ಲಿ ಅಷ್ಟು ಸಮ ಸಮಂಜಸವಲ್ಲ, ಅದರ ಹಿಂದೆ ಮರೆತಿರುವ ಇತಿಹಾಸ ಮತ್ತು ನಾಗರಿಕತೆಯ ಕಥನವೇ ಬೇರೆ ಎನ್ನುವುದನ್ನು ಅರಿಯಬೇಕಾಗಿದೆ.
ಜನವರಿಯಿಂದ ಡಿಸೆಂಬರ್ವರೆಗಿನ ಹನ್ನೆರಡು ತಿಂಗಳ ಕ್ಯಾಲೆಂಡರ್ಗೆ ಗ್ರೆಗೊರಿಯನ್ ಕ್ಯಾಲೆಂಡರ್ ಎಂಬ ಹೆಸರು ಬಂದಿರುವುದರಿಂದ ಅದು ನೇರವಾಗಿ ಕ್ರೈಸ್ತಮತದೊಂದಿಗೆ ಸಂಬಂಧ ಹೊಂದಿದೆ ಎನ್ನುವ ಭಾವನೆ ಮೂಡುವುದು ಸಹಜ. 1582ರಲ್ಲಿ ಪೋಪ್ ಗ್ರೆಗೊರಿ XIII ಜುಲಿಯನ್ ಕ್ಯಾಲೆಂಡರ್ ಅನ್ನು ಪರಿಷ್ಕರಿಸಿ ಜನವರಿ ಒಂದನ್ನೇ ಹೊಸವರ್ಷ ಎಂದು ಘೋಷಿಸಿದರು. ಆದರೆ ಆ ಆದೇಶವನ್ನು ತಕ್ಷಣ ಒಪ್ಪಿಕೊಂಡಿದ್ದು ಇಟಲಿ, ಸ್ಪೇನ್, ಪೋರ್ಚುಗಲ್ ಮತ್ತು ಫ್ರಾನ್ಸ್ ಮಾತ್ರ. ಇಂಗ್ಲೆಂಡ್ ಜನವರಿ ಒಂದನ್ನು ಹೊಸವರ್ಷವಾಗಿ ಒಪ್ಪಿಕೊಂಡಿದ್ದು 1752ರಲ್ಲಿ, ರಷ್ಯಾ ಇದನ್ನು ಸ್ವೀಕರಿಸಿದ್ದು 1918ರಲ್ಲಿ. ಅಂದರೆ, ಕ್ರೈಸ್ತ ರಾಷ್ಟ್ರಗಳೇ ಪ್ರಾರಂಭದಲ್ಲಿ ಜನವರಿ ಒಂದರ ಹೊಸವರ್ಷಕ್ಕೆ ವಿರೋಧ ವ್ಯಕ್ತಪಡಿಸಿದ್ದವು.
ಈ ವಿರೋಧಕ್ಕೆ ಕಾರಣ ಧಾರ್ಮಿಕವಾಗಿರಲಿಲ್ಲ ಅದು ಸಂಸ್ಕೃತಿಯ ಪ್ರಶ್ನೆ. ರೋಮನ್ನರ ಲೆಕ್ಕಾಚಾರವನ್ನು ಕ್ರೈಸ್ತರು ‘ಪೇಗನ್’ ಸಂಸ್ಕೃತಿಯ ಭಾಗವೆಂದು ನೋಡುತ್ತಿದ್ದರು. ಲ್ಯಾಟಿನ್ನಲ್ಲಿ ‘ಪಗುಸ್’ ಎಂದರೆ ಹಳ್ಳಿ, ‘ಪಗನುಸ್’ ಎಂದರೆ ಹಳ್ಳಿಹೈದರು. ಕ್ರೈಸ್ತೀಕರಣವು ಮೊದಲು ನಗರಗಳಲ್ಲಿ ನಡೆದಿದ್ದರಿಂದ ಹಳ್ಳಿಗಳಲ್ಲಿ ಉಳಿದಿದ್ದ ಪುರಾತನ ದೇವತೆಗಳ ಆರಾಧನೆ ಕ್ರೈಸ್ತರ ಪಾಲಿಗೆ ಅನಾಗರಿಕತೆ ಎಂದಾಯಿತು. ಹೀಗಾಗಿ ರೋಮನ್ ರಾಜರು ರೂಪಿಸಿದ್ದ ಜನವರಿ ಒಂದರ ಹೊಸವರ್ಷವನ್ನು ಒಪ್ಪಿಕೊಳ್ಳಬೇಕೇ ಎಂಬ ಪ್ರಶ್ನೆ ಅವರಿಗೆ ಎದುರಾಯಿತು.
ಜನವರಿಯಿಂದ ಡಿಸೆಂಬರ್ ಮಾದರಿಯ ಕ್ಯಾಲೆಂಡರ್ ಗ್ರೀಕರ ಕಾಲದಲ್ಲಿಯೇ ಇದ್ದರೂ, ಜನವರಿ ವರ್ಷಾರಂಭವಾಗಿರಲಿಲ್ಲ. ಕ್ರಿಸ್ತಪೂರ್ವ 46ರಲ್ಲಿ ರೋಮನ್ನರ ಚಕ್ರವರ್ತಿ ಜೂಲಿಯಸ್ ಸೀಸರ್ ಆಡಳಿತ ಮತ್ತು ಹಣಕಾಸು ವ್ಯವಸ್ಥೆಗೆ ಶಿಸ್ತನ್ನು ತರುವ ಉದ್ದೇಶದಿಂದ ಜನವರಿ ಒಂದನ್ನೇ ವರ್ಷದ ಆರಂಭ ಎಂದು ಘೋಷಿಸಿದ. ಸೂರ್ಯನ ಸುತ್ತ ಭೂಮಿ ಒಂದು ಸುತ್ತು ಬರುವ ಅವಧಿ 365.2422 ದಿನಗಳು ಎಂಬ ಲೆಕ್ಕಕ್ಕೆ ಹೊಂದಿಸಲು ನಾಲ್ಕು ವರ್ಷಕ್ಕೊಮ್ಮೆ ಲೀಪ್ ಇಯರ್ ವ್ಯವಸ್ಥೆಯನ್ನು ತಂದನು. ಆದರೆ ಈ ಲೆಕ್ಕಾಚಾರದಲ್ಲೂ ಸಣ್ಣ ವ್ಯತ್ಯಾಸ ಉಳಿದಿದ್ದು, ಶತಮಾನಗಳ ನಂತರ ದಿನಗಳ ಅಸಮತೋಲನ ಉಂಟಾಯಿತು. ಇದನ್ನು ಪೋಪ್ ಗ್ರೆಗೊರಿ ಪರಿಷ್ಕರಿಸಿ ಇಂದಿನ ಗ್ರೆಗೊರಿಯನ್ ಕ್ಯಾಲೆಂಡರ್ ರೂಪಿಸಿದರು.
ಜನವರಿ ಎಂಬ ಹೆಸರು ಕೂಡ ರೋಮನ್ ದೇವತೆ ಜಾನುಸ್ನಿಂದ ಬಂದಿದೆ. ಎರಡು ಮುಖಗಳಿರುವ ಈ ದೇವತೆ ಆರಂಭ ಮತ್ತು ಅಂತ್ಯದ ಪ್ರತೀಕ. ಹಿಮ್ಮುಖವಾಗಿ ಮತ್ತು ಮುಮ್ಮುಖವಾಗಿ ಒಂದೇ ಸಮಯದಲ್ಲಿ ನೋಡುವ ಶಕ್ತಿ ಹೊಂದಿದ್ದ ಜಾನುಸ್, ಸಮಯದ ಸಂಕ್ರಮಣವನ್ನು ಸೂಚಿಸುವ ದೈವ. ಕ್ರೈಸ್ತರು ಆವರೆಗೆ ಮಾರ್ಚ್ 25ನ್ನು ಹೊಸವರ್ಷವಾಗಿ ಆಚರಿಸುತ್ತಿದ್ದರು. ಮೇರಿ ಗರ್ಭಧರಿಸಿದ ದಿನ ಎಂದು ನಂಬಲಾಗುತ್ತಿದ್ದುದೇ ಕಾರಣ. ಹೀಗಾಗಿ ಪೇಗನ್ ದೇವತೆಯ ಹೆಸರಿನ ತಿಂಗಳು ವರ್ಷಾರಂಭವಾಗುವುದರ ಬಗ್ಗೆ ಕ್ರೈಸ್ತರಲ್ಲಿ ಗಂಭೀರ ವಿರೋಧವೂ ಇತ್ತು.
ತಿಂಗಳುಗಳ ಹೆಸರಲ್ಲಿಯೇ ಬಹುದೇವತಾರಾಧನೆ ಸಂಸ್ಕೃತಿಯ ಗುರುತುಗಳು ಇಂದಿಗೂ ಜೀವಂತವಾಗಿವೆ. ಫೆಬ್ರವರಿ ಶುದ್ಧೀಕರಣದ ದೇವತೆ ಫೆಬ್ರುವಾ, ಮಾರ್ಚ್ ಯುದ್ಧದ ದೇವತೆ ಮಾರ್ಸ್, ಏಪ್ರಿಲ್ ಶುಕ್ರ (ಅಪ್ರೊಡೈಟ್), ಮೇ ಭೂದೇವತೆ ಮೈಯಾ, ಜೂನ್ ಮದುವೆಯ ದೇವತೆ ಜುನೊ. ಜುಲೈ ಜೂಲಿಯಸ್ ಸೀಸರ್ ಹೆಸರಿನಿಂದ, ಆಗಸ್ಟ್ ಅಗಸ್ಟಸ್ ಚಕ್ರವರ್ತಿಯಿಂದ ಬಂದಿದೆ. ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್, ಡಿಸೆಂಬರ್ ಇವು ಲ್ಯಾಟಿನ್ ಸಂಖ್ಯೆಗಳೇ. ಸಂಸ್ಕೃತದ ಸಪ್ತಮ, ಅಷ್ಟಮ, ನವಮ, ದಶಮಗಳೊಂದಿಗೆ ಇರುವ ಸಾಮ್ಯತೆ ಇದೆ. ಅದು ಭಾಷೆಗಳ ಮೂಲ ಸಂಬಂಧವನ್ನು ನೆನಪಿಸುತ್ತದೆ.
ಪ್ರಾಚೀನ ಜಗತ್ತಿನಲ್ಲಿ ವರ್ಷಾರಂಭ ಎಲ್ಲೆಡೆ ನಿಸರ್ಗದೊಂದಿಗೆ ಸಂಬಂಧ ಹೊಂದಿತ್ತು. ಭಾರತದಲ್ಲಿ ಚೈತ್ರ ಮಾಸ, ಬ್ಯಾಬಿಲೋನಿನಲ್ಲಿ ಮಾರ್ಚ್–ಏಪ್ರಿಲ್ ಮಧ್ಯೆ, ಚೀನಾದಲ್ಲಿ ಚಳಿಗಾಲದ ಅಂತ್ಯ, ಈಜಿಪ್ತಿನಲ್ಲಿ ನೈಲ್ ನದಿ ಪ್ರವಾಹ—ಎಲ್ಲವೂ ಕೃಷಿ ಮತ್ತು ಋತುಚಕ್ರಕ್ಕೆ ಜೋಡಿಸಲ್ಪಟ್ಟಿದ್ದವು. ಬ್ಯಾಬಿಲೋನಿನ ಹೊಸವರ್ಷ ಆಚರಣೆಗಳಲ್ಲಿ ರಾಜನು ದೇವಾಲಯದಲ್ಲಿ ತನ್ನ ತಪ್ಪುಗಳನ್ನು ಒಪ್ಪಿಕೊಂಡು ಪ್ರಾಯಶ್ಚಿತ್ತ ಮಾಡಿಕೊಳ್ಳುವ ಸಂಪ್ರದಾಯವೂ ಇತ್ತು. ರಾಜನೂ ಧರ್ಮಕ್ಕೆ ಒಳಪಟ್ಟವನೇ ಎಂಬ ಸಂದೇಶ ಅಲ್ಲಿ ಅಡಗಿತ್ತು. ಭಾರತೀಯ ಪರಂಪರೆಯಲ್ಲಿಯೂ “ಧರ್ಮವು ರಾಜನಿಗಿಂತ ಮೇಲಿರುವುದು” ಎಂಬ ತತ್ತ್ವವೂ ಇತ್ತು.
ಒಟ್ಟಾರೆ, ಇಂದು ನಾವು ಬಳಸುವ ಆಧುನಿಕ ಕ್ಯಾಲೆಂಡರ್ ಯಾವುದೋ ಒಂದು ಧರ್ಮದ ಸ್ವತ್ತಲ್ಲ. ಅದು ಸಾವಿರಾರು ವರ್ಷಗಳ ನಾಗರಿಕತೆ, ದೈವಕಲ್ಪನೆ, ವಿಜ್ಞಾನ ಮತ್ತು ನಿಸರ್ಗದ ಅರಿವಿನ ಸಮೂಹ ಫಲ. ಹೀಗಾಗಿ ಯುಗಾದಿಯೂ ನಮ್ಮದೇ, ಜನವರಿಯೂ ನಮ್ಮದೇ. ಎರಡನ್ನೂ ತಿಳಿದುಕೊಂಡು ಆಚರಿಸುವುದೇ ನಿಜವಾದ ಸಂಸ್ಕೃತಿಯ ಅರಿವು. ಜನವರಿ ಒಂದರ ಸಂಭ್ರಮ ಕೇವಲ ಪಾಶ್ಚಾತ್ಯ ಪ್ರಭಾವವಲ್ಲ, ಅದು ಮಾನವ ನಾಗರಿಕತೆಯ ದೀರ್ಘ ಪ್ರಯಾಣದ ಒಂದು ಜೀವಂತ ಅವಶೇಷ.