ನವದೆಹಲಿ, ಜ. 05 (DaijiworldNews/TA): ಕಾರ್ಪೊರೇಟ್, ಅಪರಾಧ, ಕುಟುಂಬ ಸಂಬಂಧಿತ ವಿವಾದಗಳು ಸೇರಿದಂತೆ ವಿವಿಧ ಕಾನೂನು ಸಮಸ್ಯೆಗಳ ಕುರಿತು ಇದೀಗ ವಾಟ್ಸಾಪ್ನಲ್ಲೇ ಉಚಿತವಾಗಿ ತಜ್ಞರ ಸಲಹೆ ಪಡೆಯುವ ಅವಕಾಶ ಲಭ್ಯವಾಗಿದೆ. ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯವು ‘ನ್ಯಾಯ ಸೇತು’ ಎಂಬ ಹೊಸ ಡಿಜಿಟಲ್ ಕಾನೂನು ಸೇವೆಯನ್ನು 2026ರ ಜನವರಿ 1ರಿಂದ ಅಧಿಕೃತವಾಗಿ ಆರಂಭಿಸಿದೆ. ಈ ಸೇವೆಯ ಮೂಲಕ ದೇಶದ ಯಾವುದೇ ನಾಗರಿಕರು ತಮ್ಮ ಕಾನೂನು ಸಮಸ್ಯೆಗಳ ಕುರಿತು ಮೂಲಭೂತ ಮಾಹಿತಿ ಮತ್ತು ಮಾರ್ಗದರ್ಶನ ಪಡೆಯಬಹುದು.

ವಾಟ್ಸಾಪ್ನಲ್ಲಿ ಲಭ್ಯವಿರುವ ನ್ಯಾಯ ಸೇತು ಸೇವೆಯು ಕಾನೂನು ಸಲಹೆ, ನೆರವು ಹಾಗೂ ಸಮಾಲೋಚನೆಗಳನ್ನು ಒದಗಿಸುತ್ತದೆ. ಯಾವುದೇ ವ್ಯಾಜ್ಯ ಅಥವಾ ಕಾನೂನು ಸಮಸ್ಯೆಗೆ ಸಂಬಂಧಿಸಿದಂತೆ ಅನ್ವಯಿಸುವ ಕಾನೂನುಗಳು ಯಾವುವು, ಆ ವ್ಯಾಜ್ಯದಲ್ಲಿ ವ್ಯಕ್ತಿಗೆ ಇರುವ ಹಕ್ಕುಗಳು ಮತ್ತು ಕಾನೂನು ಅವಕಾಶಗಳು ಯಾವುವು, ಮುಂದಿನ ಕ್ರಮಗಳನ್ನು ಹೇಗೆ ಕೈಗೊಳ್ಳಬೇಕು ಎಂಬ ಕುರಿತು ಪ್ರಾಥಮಿಕ ಮಾಹಿತಿ ನೀಡಲಾಗುತ್ತದೆ. ಇದರಿಂದ ಜನರಿಗೆ ಕಾನೂನು ಕುರಿತು ಅರಿವು ಮೂಡಿ, ಸರಿಯಾದ ನಿರ್ಧಾರ ಕೈಗೊಳ್ಳಲು ಸಹಾಯವಾಗಲಿದೆ.
ನ್ಯಾಯ ಸೇತು ಸೇವೆಯನ್ನು ಬಳಸಲು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯವು 7217711814 ಎಂಬ ವಾಟ್ಸಾಪ್ ಸಂಖ್ಯೆಯನ್ನು ನೀಡಿದೆ. ಈ ಸಂಖ್ಯೆಗೆ ‘Hi’ ಎಂದು ಸಂದೇಶ ಕಳುಹಿಸಿದರೆ ಸಾಕು. ಟೆಲಿ-ಲಾ (Tele-Law) ಹೆಸರಿನಲ್ಲಿ ಈ ಸೇವೆ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸಲು ಆರಂಭಿಸುತ್ತದೆ. ಇದು ಸಂಪೂರ್ಣವಾಗಿ ಚಾಟ್ಬೋಟ್ ಆಧಾರಿತ ಸೇವೆಯಾಗಿದ್ದು, ಬಳಕೆದಾರರ ಪ್ರಶ್ನೆಗಳಿಗೆ ಅನುಗುಣವಾಗಿ ಉತ್ತರಗಳನ್ನು ನೀಡುತ್ತದೆ.
ವರದಕ್ಷಿಣ ಕಿರುಕುಳ, ಕುಟುಂಬ ಕಲಹಗಳು ಸೇರಿದಂತೆ ವಿವಿಧ ಕೌಟುಂಬಿಕ ಹಾಗೂ ಕಾನೂನು ಸಮಸ್ಯೆಗಳ ಕುರಿತು ಸಂಬಂಧಿತ ಕಾನೂನುಗಳು ಯಾವುವು ಮತ್ತು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದರ ಬಗ್ಗೆ ಈ ಚಾಟ್ಬೋಟ್ ಮಾರ್ಗದರ್ಶನ ನೀಡುತ್ತದೆ. ಆದರೆ, ಈ ಸೇವೆ ಕೇವಲ ಕಾನೂನು ಮಾಹಿತಿ ಮತ್ತು ಸಲಹೆ ನೀಡುವ ಮಟ್ಟಕ್ಕೆ ಮಾತ್ರ ಸೀಮಿತವಾಗಿದ್ದು, ಕೋರ್ಟ್ನಲ್ಲಿ ಅರ್ಜಿ ಸಲ್ಲಿಸುವುದು ಅಥವಾ ಪ್ರಕರಣ ನಡೆಸುವಂತಹ ಕಾರ್ಯಗಳಿಗೆ ವೃತ್ತಿಪರ ವಕೀಲರ ನೆರವು ಅಗತ್ಯವಾಗುತ್ತದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.