ಬೆಂಗಳೂರು,ಜ. 05 (DaijiworldNews/AK): ಬಳ್ಳಾರಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಮನೆ ಬಳಿ ನಡೆದ ಗಲಭೆ ಹಾಗೂ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದ ತನಿಖೆಯಲ್ಲಿ ಹಲವು ಅನುಮಾನಗಳು ಮತ್ತು ಗಂಭೀರ ಲೋಪಗಳಿವೆ ಎಂದು ಆರೋಪಿಸಿದರು. ಬಳ್ಳಾರಿ ಕಾಂಗ್ರೆಸ್ ಕಾರ್ಯಕರ್ತನ ಮೃತದೇಹವನ್ನು ಎರಡು ಬಾರಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂಬ ಸ್ಫೋಟಕ ಆರೋಪ ಮಾಡಿದ ಕುಮಾರಸ್ವಾಮಿ, ಈ ನಡೆ ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದರು.
‘ಎರಡು ಬಾರಿ ಶವ ಪರೀಕ್ಷೆ ಮಾಡಿದ್ದೀರಿ? ಮೊದಲ ಬಾರಿ ಏನು ವರದಿ ಬಂತು? ಎರಡನೇ ಬಾರಿ ಯಾರು ಒತ್ತಾಯ ಮಾಡಿದರು? ಯಾರ ಅನುಮತಿಯಲ್ಲಿ ಮತ್ತೆ ಶವ ಪರೀಕ್ಷೆ ನಡೆಸಲಾಯಿತು? ಯಾರನ್ನು ಮೆಚ್ಚಿಸಲು ಈ ಆದೇಶ’ ಎಂದು ಕುಮಾರಸ್ವಾಮಿ ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.
ಮೊದಲ ಮರಣೋತ್ತರ ಪರೀಕ್ಷೆಯಲ್ಲಿ ಗುಂಡು ತೆಗೆಯಲಾಗಲಿಲ್ಲ ಎಂಬ ಮಾಹಿತಿ ಇದೆ. ಇದಕ್ಕೆ ಕಾರಣವೇನು? ಇದನ್ನು ಸಮಗ್ರವಾಗಿ ತನಿಖೆ ಮಾಡುತ್ತೀರಾ ಅಥವಾ ನ್ಯಾಯವನ್ನು ಮರೆಮಾಚುತ್ತೀರಾ? ರಾಜ್ಯದ ಜನರಿಗೆ ರಕ್ಷಣೆ ನೀಡುವ ಜವಾಬ್ದಾರಿ ಸರ್ಕಾರಕ್ಕಿಲ್ಲವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆಯನ್ನೇ ಪ್ರತಿಷ್ಠೆಯ ವಿಚಾರವನ್ನಾಗಿ ಮಾಡಿಕೊಂಡ ಪರಿಣಾಮ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಹತ್ಯೆಯಾಗಿದೆ. ಶಾಸಕ ಭರತ್ ರೆಡ್ಡಿಯ ಆಪ್ತ ಸತೀಶ್ ರೆಡ್ಡಿಯನ್ನು ಬಂಧಿಸಿದ್ದೀರಾ ಅಥವಾ ರಾಜಾತಿಥ್ಯ ನೀಡಿ ಸರ್ಕಾರಿ ವೆಚ್ಚದಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೀರಾ ಎಂದು ಕುಮಾರಸ್ವಾಮಿ ಕಿಡಿಕಾರಿದರು.