ನವದೆಹಲಿ, ಜ. 05 (DaijiworldNews/AK):2020 ರ ದೆಹಲಿ ಗಲಭೆ ಪ್ರಕರಣದ ಆರೋಪಿಗಳಾಗಿರುವ ಉಮರ್ ಖಾಲಿದ್ , ಶರ್ಜೀಲ್ ಇಮಾಮ್ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಡ ಪೀಠವು ಡಿಸೆಂಬರ್ 2025ರಲ್ಲಿ ದಿಲ್ಲಿ ಹೈಕೋರ್ಟ್ ಜಾಮೀನು ನಿರಾಕರಿಸಿದ್ದ ಸೆಪ್ಟೆಂಬರ್ 2ರ ತೀರ್ಪಿನ ವಿರುದ್ಧ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿತ್ತು.
ಉಮರ್ ಖಾಲಿದ್, ಶರ್ಜೀಲ್ ಇಮಾಮ್ ಜಾಮೀನು ನಿರಾಕರಿಸಿದರೆ ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಮೊಹಮ್ಮದ್ ಸಮೀರ್ ಖಾನ್, ಶಾದಾಬ್ ಅಹ್ಮದ್, ಶಿಫಾ ಉರ್ ರೆಹಮಾನ್ ಸುಪ್ರೀಂಕೋರ್ಟ್ 12 ಷರತ್ತು ವಿಧಿಸಿ ಜಾಮೀನು ನೀಡಿದೆ.
ಫೆಬ್ರವರಿ 24, 2020 ರಂದು ಈಶಾನ್ಯ ದೆಹಲಿಯಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ಸಿ) ವಿರುದ್ಧ ವ್ಯಾಪಕ ಪ್ರತಿಭಟನೆಗಳ ಸಂದರ್ಭದಲ್ಲಿ ಕೋಮು ಘರ್ಷಣೆ ಭುಗಿಲೆದ್ದಿತು. ದಶಕಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಅತ್ಯಂತ ಭೀಕರ ಗಲಭೆಗಳಲ್ಲಿ ಒಂದಾದ ಈ ಗಲಭೆಯು ಸುಮಾರು ದಿನಗಳ ಕಾಲ ಮುಂದುವರಿದು, ಹೆಚ್ಚಾಗಿ ಮುಸ್ಲಿಮರಾಗಿದ್ದ 50 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಮತ್ತು 700 ಕ್ಕೂ ಹೆಚ್ಚು ಜನರು ಗಾಯಗೊಂಡರು.
ಗಲಭೆಯನ್ನು ಪ್ರಚೋದಿಸುವ ದೊಡ್ಡ ಪಿತೂರಿಯಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಮಾಜಿ ಕೌನ್ಸಿಲರ್ ತಾಹಿರ್ ಹುಸೇನ್ ಸೇರಿದಂತೆ ಇಪ್ಪತ್ತು ಜನರ ಮೇಲೆ ಆರೋಪ ಹೊರಿಸಲಾಯಿತು.
ಖಾಲಿದ್ ಮತ್ತು ಇಮಾಮ್ ಕ್ರಿಮಿನಲ್ ಪಿತೂರಿಯಲ್ಲಿ ಇಬ್ಬರೂ ಭಾಗಿಯಾಗಿರುವುದಕ್ಕೆ ಸೂಚಿಸುವ ಸಾಕಷ್ಟು ಪುರಾವೆಗಳನ್ನು ಪ್ರಾಸಿಕ್ಯೂಷನ್ ನೀಡಿದ್ದು ನಮಗೆ ತೃಪ್ತಿ ತಂದಿದೆ ಎಂದು ಕೋರ್ಟ್ ಹೇಳಿದೆ.
ಖಾಲಿದ್ ಮತ್ತು ಇಮಾಮ್ ಪ್ರತಿಭಟನೆ ನಡೆಸಿಲ್ಲ. ದೇಶವನ್ನು ಅಸ್ಥಿರಗೊಳಿಸುವ ಸಂಚನ್ನು ಮಾಡಿದ್ದಾರೆ. ಇಮಾಮ್ ತನ್ನ ಭಾಷಣದಲ್ಲಿ ಸಿಲಿಗುರಿ ಕಾರಿಡಾರ್ ಅನ್ನು ಮುಚ್ಚಿ ಅಸ್ಸಾಂ ಅನ್ನು ಭಾರತದಿಂದ ಶಾಶ್ವತ ಸಂಪರ್ಕ ಕಡಿತಗೊಳಿಸಲು ಕರೆ ನೀಡಿದ್ದನ್ನು ದೆಹಲಿ ಪೊಲೀಸರ ಪರ ವಕೀಲರು ಸುಪ್ರೀಂ ಕೋರ್ಟ್ ಗಮನಕ್ಕೆ ತಂದಿದ್ದರು.
ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ(UAPA) ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಆರೋಪಿಗಳು ಐದು ವರ್ಷಗಳಿಗಿಂತ ಹೆಚ್ಚು ಕಾಲ ಬಂಧನದಲ್ಲಿದ್ದಾರೆ.
2020 ಫೆ.23 ರಿಂದ ಫೆ.29 ರವರೆಗೆ ನಡೆದ ಗಲಭೆಯಲ್ಲಿ 53 ಮಂದಿ ಮೃತಪಟ್ಟಿದ್ದರು. ಈ ಗಲಭೆಗೆ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಗುಲ್ಫಿಶಾ ಫಾತಿಮಾ ಪ್ರಚೋದನೆ ನೀಡಿದ್ದೇ ಕಾರಣ ಎಂದು ದೆಹಲಿ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿದ್ದರು.