ಹುಬ್ಬಳ್ಳಿ, ಜ. 04 (DaijiworldNews/AA): ವಿಬಿಜಿ ರಾಮ್ ಜಿ ಬಗ್ಗೆ ರಾಜ್ಯ ಸರ್ಕಾರ ಸುಳ್ಳು ಹೇಳುತ್ತಾ ರಾಜ್ಯದ ಕೂಲಿ ಕಾರ್ಮಿಕರ ದಾರಿತಪ್ಪಿಸುತ್ತಿದೆ. ಯೋಜನೆ ಪಾರದರ್ಶಕವಾಗಿ ಮತ್ತು ಸಮರ್ಥವಾಗಿ ಜಾರಿಯಾಗುವುದನ್ನು ಸಹಿಸದ ಪ್ರತಿಪಕ್ಷಗಳು ಈ ಯೋಜನೆಯ ಬಗ್ಗೆ ಸುಳ್ಳು ವದಂತಿಗಳನ್ನು ಹರಡುತ್ತಿವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿಕಾರಿದ್ದಾರೆ.

"ನರೇಗಾ ಯೋಜನೆಯನ್ನು ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ ಎಂದು ಪರಿವರ್ತನೆಗೊಳಿಸಲಾಗಿದ್ದು, ಇದರಲ್ಲಿಯೂ ಪ್ರತಿಪಕ್ಷದವರು ರಾಜಕೀಯ ಮಾಡುತ್ತಿರುವುದು ಅವರ ಮೌಢ್ಯವನ್ನು ತೋರಿಸುತ್ತದೆ. ನರೇಗಾ ಯೋಜನೆಯಲ್ಲಿ ಪ್ರತಿವರ್ಷ ನೂರು ದಿನಗಳ ಉದ್ಯೋಗ ಖಾತರಿಯಿತ್ತು . ಈಗ 125 ದಿನಗಳಿಗೆ ಹೆಚ್ಚಳ ಮಾಡಲಾಗಿದೆ. ಇದರಿಂದ ಗ್ರಾಮೀಣ ಜನರಿಗೆ ಉದ್ಯೋಗವಕಾಶದ ಭರವಸೆಯೊಂದಿಗೆ ಆದಾಯದ ಭದ್ರತೆಯು ಹೆಚ್ಚಾಗಲಿದೆ" ಎಂದು ಅವರು ತಿಳಿಸಿದ್ದಾರೆ.
"ಮುಂದೆಯೂ ಆಯಾ ಗ್ರಾಮ ಪಂಚಾಯತಗಳೇ ಯೋಜನೆಯ ಕೇಂದ್ರವಾಗಿರಲಿದೆ. ಆದರೆ ಇದನ್ನು ಕೇಂದ್ರ ಸರ್ಕಾರ ನಿರ್ಧಾರ ಮಾಡುತ್ತದೆ ಎಂಬ ಭೀತಿಯನ್ನು ಕಾಂಗ್ರೆಸ್ ಮೂಡಿಸುತ್ತಿದೆ. ಕೃಷಿ ಚಟುವಟಿಕೆಗಳಿಗೆ ರೈತರಿಗೆ ಅನುಕೂಲ ಮಾಡಿಕೊಡಲು ವರ್ಷದಲ್ಲಿ 60 ದಿನಗಳ ಬಿಡುವು ನೀಡಲಾಗಿದೆ. ಇಂತಹ ರೈತ ಸ್ನೇಹಿ ನಿಯಮಕ್ಕೆ ರಾಜ್ಯ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದ್ದು, ಕೃಷಿ ವಿರೋಧಿ ನೀತಿ ಅನುಸರಿಸುತ್ತಿದೆ" ಎಂದು ವಾಗ್ದಾಳಿ ನಡೆಸಿದರು.
"ಹಿಂದೆ ಕೂಲಿಕಾರರ ಹೆಸರು ಹೇಳಿ ನರೇಗಾ ಯೋಜನೆ ದುರ್ಬಳಕೆ ಮಾಡಲಾಗುತ್ತಿತ್ತು. ಅದಕ್ಕಾಗಿ ಬಯೋಮೆಟ್ರಿಕ್ ತಂತ್ರಜ್ಞಾನ ಬಳಕೆ ಕಡ್ಡಾಯ ಮಾಡಲಾಗಿದೆ. ರಾಜ್ಯ ಸರ್ಕಾರಗಳು ಅನಗತ್ಯ ವೆಚ್ಚ ಕಡಿಮೆ ಮಾಡಲು ಭ್ರಷ್ಟಾಚಾರಕ್ಕೆ ಕಡಿವಾಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ೬೦:೪೦ ಅನುಪಾತದಲ್ಲಿ ನಿಗದಿ ಮಾಡಲಾಗಿದೆ" ಎಂದರು.
"ಸರ್ಕಾರದ ಆಡಳಿತಾತ್ಮಕ ಹಿತದೃಷ್ಟಿಯಿಂದ ಮತ್ತು ಕಾಲಾನುಕಾಲಕ್ಕೆ ಯೋಜನೆಗಳ್ಳಲ್ಲಿ ಪಾರದರ್ಶಕತೆ ಮತ್ತು ಪರಿಣಾಮ ತರುವ ನಿಟ್ಟಿನಲ್ಲಿ ಕೆಲ ಯೋಜನೆಗಳಲ್ಲಿ ಅಗತ್ಯ ಪರಿಷ್ಕರಣೆ ತರುವುದು ಅವಶ್ಯವಾಗಿರುತ್ತದೆ. ಈ ಬದಲಾವಣೆಯ ಮುಖ್ಯ ಉದ್ದೇಶ ಜನರ ಜೀವನೋಪಾಯವನ್ನು ಬಲಪಡಿಸುವ ಕಲ್ಯಾಣ ಮತ್ತು ಮೂಲ ಸೌಕರ್ಯ ಅಭಿವೃದ್ಧಿಇವೆರಡನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕಿದೆ. ಏಕೆಂದರೆ ಇವೆರೆಡೂ ಒಂದಕ್ಕೊಂದು ಪೂರಕ ಮತ್ತು ಅನಿವಾರ್ಯ" ಎಂದು ಹೇಳಿದರು.