ನವದೆಹಲಿ, ಜ. 04 (DaijiworldNews/TA): ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ ವಿರುದ್ಧ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ನೋಟಿಸ್ ಜಾರಿ ಮಾಡಿದೆ. ಎಕ್ಸ್ನ ಎಐ ಚಾಟ್ಬಾಟ್ ‘ಗ್ರೋಕ್’ ಬಳಸಿ ಮಹಿಳೆಯರು ಮತ್ತು ಮಕ್ಕಳ ಚಿತ್ರಗಳನ್ನು ಅನಾಚಾರ ರೀತಿಯಲ್ಲಿ ಎಡಿಟ್ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಗ್ರೋಕ್ ಎಐ ಬಳಸಿ ಅಪ್ರಸ್ತುತ ಹಾಗೂ ಕಾನೂನುಬಾಹಿರ ಚಿತ್ರಗಳನ್ನು ಸೃಷ್ಟಿಸಲಾಗುತ್ತಿದೆ ಎಂಬ ವರದಿಗಳು ಬೆಳಕಿಗೆ ಬಂದ ಬಳಿಕ ಸಚಿವಾಲಯ ಗಂಭೀರ ಕಳವಳ ವ್ಯಕ್ತಪಡಿಸಿದೆ. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳನ್ನು ಗುರಿಯಾಗಿಸಿಕೊಂಡು ಅಶ್ಲೀಲ ಹಾಗೂ ಲೈಂಗಿಕ ವಿಚಾರವಾಗಿ ಪ್ರಸಾರ ನಡೆಯುತ್ತಿರುವುದು ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಐಟಿ ನಿಯಮಗಳ ಉಲ್ಲಂಘನೆಯಾಗಿದೆ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ಹಾಗೂ ಐಟಿ ನಿಯಮಗಳು, 2021ರ ಅಡಿಯಲ್ಲಿ ಇರುವ ಕಾನೂನುಬದ್ಧ ಜವಾಬ್ದಾರಿಗಳನ್ನು ಪಾಲಿಸುವಲ್ಲಿ ಎಕ್ಸ್ ವಿಫಲವಾಗಿದೆ ಎಂದು ಕೇಂದ್ರ ಸರ್ಕಾರ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ 72 ಗಂಟೆಗಳೊಳಗೆ ಅಗತ್ಯ ಕ್ರಮ ಕೈಗೊಂಡು ಸ್ಪಷ್ಟನೆ ನೀಡುವಂತೆ ಸಚಿವಾಲಯ ಸೂಚನೆ ನೀಡಿದೆ.
ಭವಿಷ್ಯದಲ್ಲಿ ಇಂತಹ ಕಾನೂನುಬಾಹಿರ ವಿಷಯಗಳ ಸೃಷ್ಟಿ ಮತ್ತು ಪ್ರಸಾರವನ್ನು ತಡೆಯಲು ಗ್ರೋಕ್ನ ತಾಂತ್ರಿಕ ಹಾಗೂ ಆಡಳಿತಾತ್ಮಕ ವ್ಯವಸ್ಥೆಗಳ ಸಮಗ್ರ ಪರಿಶೀಲನೆ ನಡೆಸಬೇಕು ಎಂದು ಸಚಿವಾಲಯ ನಿರ್ದೇಶಿಸಿದೆ. ಜೊತೆಗೆ ಈಗಾಗಲೇ ಇರುವ ಆಕ್ಷೇಪಾರ್ಹ ವಿಷಯವನ್ನು ತಕ್ಷಣವೇ ವೇದಿಕೆಯಿಂದ ತೆಗೆದುಹಾಕುವಂತೆ ಸೂಚಿಸಲಾಗಿದೆ.
ಎಐ ತಂತ್ರಜ್ಞಾನ ದುರುಪಯೋಗದ ಕುರಿತು ದೇಶಾದ್ಯಂತ ವ್ಯಕ್ತವಾಗುತ್ತಿರುವ ಆತಂಕ ಮತ್ತು ಟೀಕೆಗಳ ನಡುವೆಯೇ ಕೇಂದ್ರ ಸರ್ಕಾರದ ಈ ಕ್ರಮ ಮಹತ್ವ ಪಡೆದುಕೊಂಡಿದೆ.