ನವದೆಹಲಿ, ಜ.01 (DaijiworldNews/TA): 2025ನೇ ವರ್ಷಕ್ಕೆ ವಿದಾಯ ಹೇಳಿ, 2026ರ ಹೊಸ ವರ್ಷವನ್ನು ದೇಶಾದ್ಯಂತ ಸಂಭ್ರಮದಿಂದ ಸ್ವಾಗತಿಸಲಾಗಿದೆ. ಹಳೆಯ ವರ್ಷದ ಕಹಿ ನೆನಪುಗಳನ್ನು ಮರೆತು, ಹೊಸ ಭರವಸೆ, ಹೊಸ ಕನಸುಗಳು ಮತ್ತು ಹೊಸ ಸಂಕಲ್ಪಗಳೊಂದಿಗೆ ಮುಂದುವರಿಯುವ ಉತ್ಸಾಹ ಎಲ್ಲರಲ್ಲೂ ಕಂಡುಬರುತ್ತಿದೆ. ಈ ಸಂಭ್ರಮದ ನಡುವೆ ಗೂಗಲ್ ಕೂಡ ಹೊಸ ವರ್ಷವನ್ನು ವಿಶೇಷವಾಗಿ ಸ್ವಾಗತಿಸಿದ್ದು ಗಮನಸೆಳೆದಿದೆ.

ಹೊಸ ವರ್ಷದ ಅಂಗವಾಗಿ ಗೂಗಲ್ ಆಕರ್ಷಕ ಹಾಗೂ ಚೈತನ್ಯ ತುಂಬುವ ಕಸ್ಟಮೈಸ್ಡ್ ಆ್ಯನಿಮೆಟೆಡ್ ಗೂಗಲ್ ಡೂಡಲ್ ಅನ್ನು ಬಿಡುಗಡೆ ಮಾಡಿದೆ. ಇಂದಿನ ಗೂಗಲ್ ಮುಖಪುಟದಲ್ಲಿ ಕಾಣಿಸುತ್ತಿರುವ ಈ ಡೂಡಲ್ ಬಳಕೆದಾರರ ಗಮನವನ್ನು ತಕ್ಷಣ ಸೆಳೆಯುತ್ತಿದೆ.
ಡೂಡಲ್ನಲ್ಲಿ G ಮತ್ತು Gle ಅಕ್ಷರಗಳ ಮಧ್ಯೆ 2026 ಸಂಖ್ಯೆಯನ್ನು ಚಿತ್ರಿಸಲಾಗಿದ್ದು, ಅದರ ಪಕ್ಕದಲ್ಲಿ ಡೈರಿ ಮತ್ತು ಪೆನ್ನು ಕಾಣಿಸುತ್ತವೆ. ಜೊತೆಗೆ ಡೈರಿಯ ಬಳಿ ಒಂದು ಕಪ್ ಬಿಸಿ ಕಾಫಿಯನ್ನೂ ತೋರಿಸಲಾಗಿದೆ. ದಿನವನ್ನು ಕಾಫಿಯೊಂದಿಗೆ ಆರಂಭಿಸಿ, ಬದುಕಿನ ಹೊಸ ಹಾಳೆಗಳಲ್ಲಿ ಸಿಹಿ ನೆನಪುಗಳು ಮತ್ತು ಸಾಧನೆಗಳನ್ನು ಬರೆಯಿರಿ ಎಂಬ ಅರ್ಥಪೂರ್ಣ ಸಂದೇಶವನ್ನು ಈ ಡೂಡಲ್ ಸಾರುತ್ತದೆ. ಹೊಸ ವರ್ಷದ ಹೊಸ ಸಂಕಲ್ಪ, ಹೊಸ ಆರಂಭ ಮತ್ತು ಸಕಾರಾತ್ಮಕ ಚಿಂತನೆಗೆ ಪ್ರತೀಕವಾಗಿರುವ ಈ ಗೂಗಲ್ ಡೂಡಲ್, 2026ನ್ನು ಉತ್ಸಾಹ ಮತ್ತು ಆಶಾವಾದದೊಂದಿಗೆ ಸ್ವಾಗತಿಸುವಂತೆ ಪ್ರೇರೇಪಿಸುತ್ತದೆ.