ಬೆಂಗಳೂರು, ಡಿ. 31 (DaijiworldNews/TA): ಇಡೀ ವಿಶ್ವವೇ 2025ರ ಕ್ಯಾಲೆಂಡರ್ ಪುಟವನ್ನು ತಿರುಗಿಸಿ 2026ರ ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗಿದೆ. ಕೆಲವು ದೇಶಗಳಲ್ಲಿ ಈಗಾಗಲೇ ನ್ಯೂ ಇಯರ್ 2026 ಸಂಭ್ರಮಾಚರಣೆ ಆರಂಭವಾಗಿದ್ದರೆ, ಭಾರತದಲ್ಲಿ ಹೊಸ ವರ್ಷಕ್ಕೆ ಇನ್ನೂ ಕೆಲವೇ ಗಂಟೆಗಳು ಬಾಕಿಯಿವೆ. ಸಿಲಿಕಾನ್ ಸಿಟಿ ಬೆಂಗಳೂರು ಹೊಸ ವರ್ಷದ ಜೋಷ್ನಲ್ಲಿ ಮುಳುಗಿದ್ದು, ನಗರದೆಲ್ಲೆಡೆ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.

ಆದರೆ, ಬೆಂಗಳೂರಿನ ಯಲಹಂಕ ಭಾಗದಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ಅಕಾಲಿಕ ಮಳೆ ತಣ್ಣೀರು ಎರಚಿದೆ. ಹೊಸ ವರ್ಷಕ್ಕೆ ಸಿಂಗಾರಗೊಂಡಿದ್ದ ಪ್ರಮುಖ ಸ್ಥಳಗಳಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಸಾಧಾರಣ ಮಳೆ ಸುರಿದಿದ್ದು, ಸಂಭ್ರಮಾಚರಣೆಗೆ ಸಜ್ಜಾಗಿದ್ದ ಜನರಿಗೆ ನಿರಾಸೆ ತಂದಿದೆ.
ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ಸಿದ್ಧವಾಗಿದ್ದ ಕೆಲ ಯುವ ಸಮೂಹಗಳು ಮಳೆಯ ಕಾರಣ ಕಾರ್ಯಕ್ರಮಗಳನ್ನು ಮುಂದೂಡಬೇಕಾದ ಸ್ಥಿತಿ ಎದುರಾಗಿದೆ. ಡಿಸೆಂಬರ್ 31ರ ರಾತ್ರಿ ನಡೆಯಬೇಕಿದ್ದ ಕೆಲ ಹೊರಾಂಗಣ ಸಂಭ್ರಮಾಚರಣೆಗಳು ಮಳೆಯ ಹಿನ್ನೆಲೆಯಲ್ಲಿ ಅಸ್ತವ್ಯಸ್ತಗೊಂಡಿವೆ.
ಒಟ್ಟಿನಲ್ಲಿ, ಬೆಂಗಳೂರು ನಗರದಲ್ಲಿ ನ್ಯೂ ಇಯರ್ ಉತ್ಸಾಹ ಉಕ್ಕುತ್ತಿದ್ದರೂ, ಯಲಹಂಕ ಭಾಗದಲ್ಲಿ ಸುರಿದ ಅಕಾಲಿಕ ಮಳೆ ಸಂಭ್ರಮಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದಂತಾಗಿದೆ.