ನವದೆಹಲಿ, ಡಿ. 31 (DaijiworldNews/TA): ಕೇವಲ ಒಂದು ತಿಂಗಳ ಹಿಂದೆ ವಿಮಾನಯಾನ ವಿಳಂಬದಿಂದ ದೇಶಾದ್ಯಂತ ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದ್ದ ಇಂಡಿಗೋ ಏರ್ಲೈನ್ಸ್ಗೆ ಇದೀಗ ಕೇಂದ್ರ ಸರ್ಕಾರ ಭಾರೀ ಶಾಕ್ ನೀಡಿದೆ. ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿರುವ ಇಂಡಿಗೋಗೆ 458 ಕೋಟಿ ರೂ.ಗಳಿಗೂ ಅಧಿಕ ಜಿಎಸ್ಟಿ ನೋಟಿಸ್ ಜಾರಿ ಮಾಡಲಾಗಿದೆ. ಈ ಬಗ್ಗೆ ಇಂಡಿಗೋ ಮಂಗಳವಾರ ಅಧಿಕೃತವಾಗಿ ಮಾಹಿತಿ ನೀಡಿದ್ದು, ತೆರಿಗೆ ಅಧಿಕಾರಿಗಳ ಆದೇಶವನ್ನು ಪ್ರಶ್ನಿಸುವುದಾಗಿ ಘೋಷಿಸಿದೆ.

ಸಿಜಿಎಸ್ಟಿ ದೆಹಲಿ ದಕ್ಷಿಣ ಆಯುಕ್ತರ ಕಚೇರಿಯ ಹೆಚ್ಚುವರಿ ಆಯುಕ್ತರು ಈ ದಂಡ ವಿಧಿಸಿದ್ದಾರೆ. ನಿಯಂತ್ರಕ ಫೈಲಿಂಗ್ ಪ್ರಕಾರ, ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ (CGST Act), 2017ರ ಸೆಕ್ಷನ್ 74ರ ಅಡಿಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಇದು 2018-19 ರಿಂದ 2022-23 ಹಣಕಾಸು ವರ್ಷಗಳ ಅವಧಿಗೆ ಸಂಬಂಧಿಸಿದ ಮೌಲ್ಯಮಾಪನದ ಭಾಗವಾಗಿದ್ದು, ಒಟ್ಟು ಜಿಎಸ್ಟಿ ಬೇಡಿಕೆ ಮತ್ತು ದಂಡದ ಮೊತ್ತ 458,26,16,980 ರೂ. ಆಗಿದೆ.
ವಿದೇಶಿ ಪೂರೈಕೆದಾರರಿಂದ ಪಡೆದ ಪರಿಹಾರದ ಮೇಲೆ ಬಡ್ಡಿ ಮತ್ತು ದಂಡದೊಂದಿಗೆ ಜಿಎಸ್ಟಿ ವಿಧಿಸಲಾಗಿದ್ದು, ಜೊತೆಗೆ ಇನ್ಪುಟ್ ತೆರಿಗೆ ಕ್ರೆಡಿಟ್ ನಿರಾಕರಿಸಲಾಗಿದೆ ಎಂದು ಇಂಡಿಗೋ ತಿಳಿಸಿದೆ. ಆದರೆ, ಜಿಎಸ್ಟಿ ಇಲಾಖೆ ಹೊರಡಿಸಿರುವ ಈ ಆದೇಶವು ತಪ್ಪಾಗಿದ್ದು, ಕಾನೂನಿಗೆ ಅನುಸಾರವಾಗಿಲ್ಲ ಎಂಬುದಾಗಿ ಕಂಪನಿ ಬಲವಾಗಿ ನಂಬಿರುವುದಾಗಿ ಹೇಳಿದೆ. ಬಾಹ್ಯ ತೆರಿಗೆ ಸಲಹೆಗಾರರ ಅಭಿಪ್ರಾಯದ ಬೆಂಬಲವೂ ಕಂಪನಿಗೆ ಇದೆ ಎಂದು ಇಂಡಿಗೋ ಸ್ಪಷ್ಟಪಡಿಸಿದೆ.
ಈ ಹಿನ್ನೆಲೆಯಲ್ಲಿ ಆದೇಶವನ್ನು ಪ್ರಶ್ನಿಸುವುದಾಗಿ ಇಂಡಿಗೋ ತಿಳಿಸಿದ್ದು, ಸೂಕ್ತ ಕಾನೂನು ಪರಿಹಾರಗಳಿಗಾಗಿ ಮುಂದಾಗುವುದಾಗಿ ಹೇಳಿದೆ. ಇದೇ ರೀತಿಯ ವಿಷಯದಲ್ಲಿ 2017-18ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಈಗಾಗಲೇ ಆಯುಕ್ತರ ಮುಂದೆ ಮೇಲ್ಮನವಿ ಸಲ್ಲಿಸಿರುವುದನ್ನೂ ಕಂಪನಿ ಉಲ್ಲೇಖಿಸಿದೆ. ಈ ನೋಟಿಸ್ ವಿರುದ್ಧ ಕಾನೂನು ಹೋರಾಟ ನಡೆಸುವುದರಿಂದ ಕಂಪನಿಯ ಹಣಕಾಸು ಸ್ಥಿತಿ, ಕಾರ್ಯಾಚರಣೆಗಳು ಅಥವಾ ಇತರ ಚಟುವಟಿಕೆಗಳ ಮೇಲೆ ಯಾವುದೇ ಮಹತ್ವದ ಪರಿಣಾಮ ಬೀರುವುದಿಲ್ಲ ಎಂದು ಇಂಡಿಗೋ ಹೇಳಿದೆ.
ಇದೇ ವೇಳೆ, ಪ್ರತ್ಯೇಕ ಪ್ರಕರಣದಲ್ಲಿ ಲಕ್ನೋದ ಜಂಟಿ ಆಯುಕ್ತರ ಕಚೇರಿಯು 2021-22ರ ಅವಧಿಗೆ ಸಂಬಂಧಿಸಿ ಇಂಡಿಗೋಗೆ 14,59,527 ರೂ.ಗಳ ಜಿಎಸ್ಟಿ ದಂಡ ವಿಧಿಸಿದೆ. ಈ ಪ್ರಕರಣದಲ್ಲೂ ಇನ್ಪುಟ್ ತೆರಿಗೆ ಕ್ರೆಡಿಟ್ ನಿರಾಕರಿಸಲಾಗಿದ್ದು, ಬಡ್ಡಿ ಮತ್ತು ದಂಡದೊಂದಿಗೆ ಬೇಡಿಕೆ ಎತ್ತಲಾಗಿದೆ.
ಈ ಕುರಿತಂತೆ ಇಂಡಿಗೋದ ಪೋಷಕ ಸಂಸ್ಥೆ ಇಂಟರ್ಗ್ಲೋಬ್ ಏವಿಯೇಷನ್ ಮತ್ತೊಂದು ನಿಯಂತ್ರಕ ಫೈಲಿಂಗ್ನಲ್ಲಿ ಪ್ರತಿಕ್ರಿಯಿಸಿ, ತೆರಿಗೆ ಇಲಾಖೆಯ ಆದೇಶ ತಪ್ಪಾಗಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ. ಬಾಹ್ಯ ತೆರಿಗೆ ಸಲಹೆಗಾರರ ಮಾರ್ಗದರ್ಶನದೊಂದಿಗೆ ಕಂಪನಿಗೆ ಬಲವಾದ ಕಾನೂನು ನೆಲೆ ಇದೆ ಎಂದು ತಿಳಿಸಿದ್ದು, ಈ ಆದೇಶವನ್ನೂ ಸೂಕ್ತ ಪ್ರಾಧಿಕಾರದ ಮುಂದೆ ಪ್ರಶ್ನಿಸುವುದಾಗಿ ಸ್ಪಷ್ಟಪಡಿಸಿದೆ.