ನವದೆಹಲಿ, ಡಿ. 27 (DaijiworldNews/TA): ಅರಾವಳಿ...ದೇಶದಾದ್ಯಂತ ಅದೊಂದೇ ಕೂಗು. ಒಮ್ಮೆ ಸರ್ಕಾರದ ನಿರ್ಧಾರ ಅದಕ್ಕೆ ಮಣಿಯದ ಜನರ ದೇಶ ಉಳಿಸಿ ಉದ್ಘಾರ. ಭಾರತಾಂಬೆಯ ಅತ್ಯಂತ ಪ್ರಾಚೀನ ಪರ್ವತ ಶ್ರೇಣಿಗೆ ಇದೆಂತಹ ಪರಿಸ್ಥಿತಿ..? ನಿಜಕ್ಕೂ ಏನಿದು ಅರಾವಳಿ ಹೋರಾಟ..ತಿಳಿಯೋಣ..........

ಉತ್ತರ ಭಾರತದ ಪಾಲಿನ ಜೀವನಾಡಿ, ಸುಪ್ರೀಂ ಕೋರ್ಟ್ ನೀಡಿದ ಒಂದು ವ್ಯಾಖ್ಯಾನ ಮತ್ತು ಕೇಂದ್ರ ಸರ್ಕಾರದ ಹೊಸ ನಿರ್ಧಾರಗಳು ಈಗ ಪರಿಸರ ಪ್ರೇಮಿಗಳನ್ನು ಕೆರಳಿಸಿದೆ. ಅರಾವಳಿ ಉಳಿಸಿ ಎಂಬ ಕೂಗು ದಿಲ್ಲಿಯಿಂದ ಗುಜರಾತ್ವರೆಗೂ ಕೇಳಿಬರುತ್ತಿದೆ. ಹೌದು ರಾಜಸ್ಥಾನದಿಂದ ಹರಿಯಾಣವರೆಗೆ ಹರಡಿರುವ ಅರಾವಳಿ ಪರ್ವತ ಶ್ರೇಣಿಯಲ್ಲಿ ಗಣಿಗಾರಿಕೆಗೆ ಕೇಂದ್ರ ಸರ್ಕಾರ ಅವಕಾಶ ನೀಡಿರುವುದನ್ನು ವಿರೋಧಿಸಿ, ದೇಶದ ನಾಲ್ಕು ರಾಜ್ಯಗಳಲ್ಲಿ ಜನರು ಬೀದಿಗಿಳಿದಿದ್ದಾರೆ. ಅರಾವಳಿ ಉಳಿಸಿ ಅಭಿಯಾನ ತೀವ್ರಗೊಂಡಿದ್ದು, ಲಕ್ಷಾಂತರ ಜನರು ಟ್ರ್ಯಾಕ್ಟರ್ಗಳೊಂದಿಗೆ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಅರಾವಳಿ ಪರ್ವತ ಶ್ರೇಣಿ ಕೇವಲ ಬೆಟ್ಟಗುಡ್ಡಗಳ ಸಾಲಲ್ಲ. ಇದು ಭಾರತದ ಅತ್ಯಂತ ಪ್ರಾಚೀನ ಪರ್ವತ ಶ್ರೇಣಿ, ಹಿಮಾಲಯಕ್ಕಿಂತಲೂ ಹಳೆಯದು. ರಾಜಸ್ಥಾನ, ಹರಿಯಾಣ, ದೆಹಲಿ ಮತ್ತು ಗುಜರಾತ್ ರಾಜ್ಯಗಳ ನೆಲ, ಜಲ ಮತ್ತು ಜನರನ್ನು ಪ್ರಕೃತಿ ವಿಕೋಪಗಳಿಂದ ರಕ್ಷಿಸುವ ಮಹತ್ವದ ಪ್ರಕೃತಿ ಗೋಡೆ ಇದಾಗಿದೆ. ಒಂದು ಕಡೆ ಮರುಭೂಮಿಯನ್ನು ತಡೆಯುವ ಶಕ್ತಿ, ಮತ್ತೊಂದು ಕಡೆ ಅರಣ್ಯ ಹಾಗೂ ಜಲ ಸಂರಕ್ಷಣೆಯ ಭದ್ರತೆ ಅರಾವಳಿಯದ್ದಾಗಿದೆ. ಲಕ್ಷಾಂತರ ಜನರ ಕುಡಿಯುವ ನೀರಿಗೆ ಆಧಾರವಾಗಿರುವ ಈ ಪರ್ವತ ಶ್ರೇಣಿ, ಅನೇಕ ವನ್ಯಜೀವಿಗಳ ಆಶ್ರಯತಾಣವೂ ಹೌದು.
ಉದಯಪುರ, ಜೋಧ್ಪುರ ಸೇರಿದಂತೆ ರಾಜಸ್ಥಾನದ ಹಲವು ಜಿಲ್ಲೆಗಳು ಮತ್ತು ಹರಿಯಾಣದ ಅನೇಕ ಪ್ರದೇಶಗಳಲ್ಲಿ ಜನರು “ಅರಾವಳಿ ನಮ್ಮ ತಾಯಿ”, “ಅರಾವಳಿ ದೇಶದ ಮಿಡಿತ”, “ಅರಾವಳಿ ಉಳಿಸಿ, ದೇಶ ಉಳಿಸಿ” ಎಂಬ ಘೋಷಣೆಗಳೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಸಾವಿರಾರು ಟ್ರ್ಯಾಕ್ಟರ್ಗಳೊಂದಿಗೆ ರಸ್ತೆಗಿಳಿದ ಜನರು, ಬೆಟ್ಟ-ಗುಡ್ಡಗಳ ಮೇಲೆ ನಿಂತು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹಾಗಿದ್ರೆ ವಿವಾದದ ಮೂಲ ಏನು?: ಕೇಂದ್ರ ಸರ್ಕಾರವು ಅರಾವಳಿ ಪರ್ವತ ಪ್ರದೇಶದಲ್ಲಿ 100 ಮೀಟರ್ಗಿಂತ ಕಡಿಮೆ ಎತ್ತರದ ಬೆಟ್ಟಗಳಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿದೆ. ಈ ನಿರ್ಧಾರವನ್ನು ಪರಿಸರವಾದಿಗಳು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಆದರೆ, ಅರಾವಳಿಯ ಶೇಕಡಾ 90ರಷ್ಟು ಪ್ರದೇಶ ಸಂರಕ್ಷಿತವಾಗಿಯೇ ಉಳಿಯಲಿದೆ, ಈಗಾಗಲೇ ಗಣಿಗಾರಿಕೆ ನಡೆದ 10% ಪ್ರದೇಶಕ್ಕೆ ಮಾತ್ರ ಅನುಮತಿ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ವಾದಿಸಿದೆ. ಈ ವಾದವನ್ನು ಸುಪ್ರೀಂ ಕೋರ್ಟ್ ಸಹ ಒಪ್ಪಿಕೊಂಡು ಗಣಿಗಾರಿಕೆಗೆ ಅವಕಾಶ ನೀಡಿದೆ.
ಹೋರಾಟಗಾರರ ಪ್ರಕಾರ, ಈಗಾಗಲೇ 128 ಪರ್ವತಗಳಲ್ಲಿ 38 ಪರ್ವತಗಳು ಗಣಿಗಾರಿಕೆಯಿಂದ ನಾಶವಾಗಿವೆ. ಅರಾವಳಿಯಲ್ಲಿ ಲಭ್ಯವಿರುವ ಗ್ರಾನೈಟ್, ಮಾರ್ಬಲ್, ಮ್ಯಾಗ್ನೆಟ್ ಮೊದಲಾದ ಖನಿಜಗಳ ಮೇಲೆ ಉದ್ಯಮಿಗಳ ಕಣ್ಣು ಬಿದ್ದಿದೆ. ಗಣಿಗಾರಿಕೆ ಮುಂದುವರೆದರೆ, ಅರಣ್ಯ ನಾಶ, ಜಲಮೂಲಗಳ ಬತ್ತುವಿಕೆ ಅಂದ್ರೆ ಬರಡಾಗುವಿಕೆ, ಭೂಕಂಪ ಹಾಗೂ ಪ್ರಕೃತಿ ವಿಕೋಪಗಳ ಭೀತಿ ಹೆಚ್ಚಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಇನ್ನೂ ಅರಾವಳಿ ನಮ್ಮ ದೇಶದ ಐತಿಹ್ಯದ ಮಹಲ್ನಲ್ಲೂ ತನ್ನ ಕೊಡುಗೆ ನೀಡಿದೆ. ಹೌದು ತಾಜ್ಮಹಲ್ ನಿರ್ಮಾಣಕ್ಕೆ ಬಳಸಿದ ಮಕ್ರಾನಾ ಮಾರ್ಬಲ್ ಕೂಡ ಅರಾವಳಿ ಪ್ರದೇಶದಲ್ಲಿಯೇ ದೊರೆಯುತ್ತದೆ. ಇದನ್ನೇ ಉದಾಹರಿಸಿ, ಉದ್ಯಮಿಗಳ ಲಾಭಕ್ಕಾಗಿ ಸರ್ಕಾರ ಪರಿಸರವನ್ನು ಬಲಿಕೊಡುತ್ತಿದೆ ಎಂಬ ಆರೋಪ ಜನರಿಂದ ಕೇಳಿಬರುತ್ತಿದೆ.
ಕೇಂದ್ರ ಸರ್ಕಾರದ ಪ್ರತಿಕ್ರಿಯೆ : ಕೇಂದ್ರ ಅರಣ್ಯ ಸಚಿವ ಭೂಪೇಂದರ್ ಯಾದವ್ ಈ ಕುರಿತು ಪ್ರತಿಕ್ರಿಯಿಸಿ, “ಅರಾವಳಿಯ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧವಾಗಿದೆ. ಕೋರ್ಟ್ ಆದೇಶ, ಅರಣ್ಯ ಮತ್ತು ರಾಜ್ಯ ಸರ್ಕಾರದ ನಿಯಮಗಳಂತೆ ಎಲ್ಲವೂ ನಡೆಯಲಿದೆ. ಕೆಲವರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ” ಎಂದು ಹೇಳಿದ್ದಾರೆ. ಈ ಪ್ರತಿಕ್ರಯೆಗೂ ಜನ ಮಣಿಯದೆ ತನ್ನ ಹೋರಾಟವನ್ನು ಮುಂದುವರೆಸಯತ್ತಲೇ ಬಂದಿದ್ದಾರೆ.
ಇತ್ತೀಚಿನ ಬೆಳವಣಿಗೆ - ಕೇಂದ್ರದ ‘ತಾತ್ಕಾಲಿಕ’ ನಿಷೇಧ : ಜನರ ಆಕ್ರೋಶ ಮತ್ತು ‘ಸೇವ್ ಅರಾವಳಿ’ ಅಭಿಯಾನದ ತೀವ್ರತೆ ಹೆಚ್ಚಾಗುತ್ತಿದ್ದಂತೆ, ಕೇಂದ್ರ ಪರಿಸರ ಸಚಿವಾಲಯವು ಡಿಸೆಂಬರ್ 2025ರ ಅಂತ್ಯದಲ್ಲಿ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಈ ಮೂಲಕ ಜನರ ಅರಾವಳಿ ಹೋರಾಟಕ್ಕೆ ಕೇಂದ್ರ ಸರ್ಕಾರ ಮಣಿದಂತೆ ಕಾಣುತ್ತಿದೆ.
ಸಂಪೂರ್ಣ ನಿಷೇಧ : ಸುಸ್ಥಿರ ಗಣಿಗಾರಿಕೆ ನಿರ್ವಹಣಾ ಯೋಜನೆ ಸಿದ್ಧವಾಗುವವರೆಗೆ, ಇಡೀ ಅರಾವಳಿ ವ್ಯಾಪ್ತಿಯಲ್ಲಿ (ರಾಜಸ್ಥಾನ, ಹರಿಯಾಣ, ಗುಜರಾತ್) ಹೊಸ ಗಣಿಗಾರಿಕೆ ಲೀಸ್ಗಳನ್ನು ನೀಡುವಂತಿಲ್ಲ ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಒಂದೆಡೆ 7,000ಕ್ಕೂ ಹೆಚ್ಚು ಎಫ್ಐಆರ್ಗಳು ಅಕ್ರಮ ಗಣಿಗಾರಿಕೆಯ ಭೀಕರತೆಯನ್ನು ತೋರಿಸುತ್ತಿದ್ದರೆ, ಮತ್ತೊಂದೆಡೆ ‘ಅರಾವಳಿ’ಯ ವ್ಯಾಖ್ಯಾನವನ್ನೇ ಬದಲಿಸಿ ಬೆಟ್ಟಗಳನ್ನು ಗಣಿಗಾರಿಕೆಗೆ ಮುಕ್ತವಾಗಿಸುವ ಪ್ರಯತ್ನಗಳು ನಡೆಯುತ್ತಿವೆ. ಒಟ್ಟಾರೆ ಈ ಹೋರಾಟ ಇಲ್ಲಿ ನಿಲ್ಲುತ್ತದೆಯೇ, ಅಥವಾ ಕೇಂದ್ರ ಸರ್ಕಾರಕ್ಕೆ ಇನ್ನಷ್ಟು ಒತ್ತಡ ಉಂಟಾಗುತ್ತದೆಯೇ? ಎಂಬುದೇ ಈಗಿನ ದೊಡ್ಡ ಪ್ರಶ್ನೆಯಾಗಿದೆ. ಅದೇನೇ ಆದರೂ ಪ್ರಕೃತಿ ಮಾನವನ ಸರ್ವತೋಮುಖ ಅಭಿವೃದ್ಧಿಗೆ ತನ್ನೆಲ್ಲಾ ಸಂಪನ್ಮೂಲವನ್ನು ಧಾರಾಳವಾಗಿ ಧಾರೆ ಎರೆದಿದೆ. ಈ ಸಂಪತ್ತನ್ನು ಮಾನವ ತಮ್ಮ ಸ್ವಾರ್ಥಕ್ಕಾಗಿ ಬಳಸದೆ ಮುಂದಿನ ಪೀಳಿಗೆಗೆ ಉಳಿಸುವ ಪ್ರಯತ್ನ ಮಾಡಬೇಕಿದೆ ಎಂಬುವುದೇ ಪರಿಸರ ಪ್ರೇಮಿಗಳ ಆಶಯ.
- ತಾರಾನವೀನ್ ಶೆಟ್ಟಿ ವರ್ಕಾಡಿ