ನವದೆಹಲಿ, ಡಿ. 27 (DaijiworldNews/TA): ಭಾರತದ ಇತಿಹಾಸದಲ್ಲಿ ಪ್ರತಿಯೊಂದು ವರ್ಷವೂ ತನ್ನದೇ ಆದ ಮಹತ್ವ ಹೊಂದಿದ್ದರೂ, 2025ನೇ ವರ್ಷ ದೇಶವನ್ನು ಜಾಗತಿಕ ವೇದಿಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಋತುವಾಗಿ ದಾಖಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಈ ವರ್ಷ ಘೋಷಿಸಿದ ಸರಣಿ ಯೋಜನೆಗಳು ಕೇವಲ ಅಭಿವೃದ್ಧಿಯ ಸೂಚಕಗಳಷ್ಟೇ ಅಲ್ಲ, ಬದಲಾಗಿ ವಿಕಸಿತ ಭಾರತ 2047ರ ಗುರಿಯನ್ನು ತಲುಪುವ ಭದ್ರ ಅಡಿಗಲ್ಲುಗಳಾಗಿವೆ.

ತಂತ್ರಜ್ಞಾನದಿಂದ ಕೃಷಿಯವರೆಗೆ, ಮೂಲಸೌಕರ್ಯದಿಂದ ರಕ್ಷಣಾ ವಲಯದವರೆಗೆ ಭಾರತ ಇಂದು ಹೊಸ ದಿಕ್ಕಿನಲ್ಲಿ ದಿಟ್ಟ ಹೆಜ್ಜೆ ಇಡುತ್ತಿದೆ. ದೇಶದ ಸಾಮಾಜಿಕ ಹಾಗೂ ಆರ್ಥಿಕ ಚಿತ್ರಣವನ್ನೇ ಬದಲಿಸಿದ ಸರ್ಕಾರದ ಪ್ರಮುಖ ಘೋಷಣೆಗಳ ಸಮಗ್ರ ನೋಟ ಇಲ್ಲಿದೆ.
ಕಾರ್ಮಿಕ ಕಾನೂನುಗಳಲ್ಲಿ ಐತಿಹಾಸಿಕ ಸುಧಾರಣೆ : ಭಾರತದ ಆರ್ಥಿಕ ಬೆಳವಣಿಗೆಗೆ ಅನುಗುಣವಾಗಿ ಕಾರ್ಮಿಕ ಕಾನೂನುಗಳಲ್ಲೂ ಮಹತ್ವದ ಬದಲಾವಣೆಗಳನ್ನು ಮೋದಿ ಸರ್ಕಾರ ಜಾರಿಗೆ ತಂದಿದೆ. ನವೆಂಬರ್ 21ರಿಂದ ಜಾರಿಯಾಗುವಂತೆ 40ಕ್ಕೂ ಹೆಚ್ಚು ಕಾರ್ಮಿಕ ಕಾನೂನುಗಳನ್ನು ನಾಲ್ಕು ಪ್ರಮುಖ ಕಾರ್ಮಿಕ ಸಂಹಿತೆಗಳಾಗಿ ಏಕೀಕರಿಸಲಾಗಿದೆ.
ಈ ಸಂಹಿತೆಗಳ ಪ್ರಮುಖ ಅಂಶಗಳು: ಎಲ್ಲಾ ಕಾರ್ಮಿಕರಿಗೆ ಕನಿಷ್ಠ ವೇತನ, ವಾರ್ಷಿಕ ಆರೋಗ್ಯ ತಪಾಸಣೆ, ಸಮಾನ ಕೆಲಸಕ್ಕೆ ಸಮಾನ ವೇತನ, ಮಹಿಳೆಯರಿಗೆ ಸುರಕ್ಷಿತ ರಾತ್ರಿ ಕೆಲಸದ ಅವಕಾಶ, ಗಿಗ್ ಹಾಗೂ ಪ್ಲಾಟ್ಫಾರ್ಮ್, ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಒಂದೇ ನೋಂದಣಿ ವ್ಯವಸ್ಥೆ, ಗ್ರಾಚ್ಯುಟಿ ಅವಧಿಯನ್ನು 5 ವರ್ಷಗಳಿಂದ 1 ವರ್ಷಕ್ಕೆ ಇಳಿಕೆ. ಈ ಕ್ರಮವು ಕಾರ್ಮಿಕರ ಹಿತಾಸಕ್ತಿಯ ಜೊತೆಗೆ ಉದ್ಯಮಗಳಿಗೆ ಸಹ ಸುಲಭ ವ್ಯವಹಾರ ವಾತಾವರಣ ಕಲ್ಪಿಸಿದೆ.
GST 2.0 - ತೆರಿಗೆ ಭಾರಕ್ಕೆ ದೊಡ್ಡ ರಿಲೀಫ್ : ಜನಸಾಮಾನ್ಯರು ಹಾಗೂ ವ್ಯಾಪಾರಿಗಳಿಗೆ ತೆರಿಗೆ ಭಾರ ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರ GST 2.0 ವ್ಯವಸ್ಥೆಯನ್ನು ಜಾರಿಗೆ ತಂದಿದೆ. 2025ರ ದೀಪಾವಳಿಯಿಂದ: 12% GST → 5%, 28% GST → 18% ಅದೇ ವೇಳೆ, ಐಷಾರಾಮಿ ವಸ್ತುಗಳಿಗೆ 40% ತೆರಿಗೆ ದರವನ್ನು ಸೆಪ್ಟೆಂಬರ್ 22, 2025ರಿಂದ ಜಾರಿಗೆ ತರಲಾಗಿದೆ.
ಉದ್ಯೋಗಾಕಾಂಕ್ಷಿಗಳಿಗೆ ಪ್ರೋತ್ಸಾಹ ಧನದ ಯೋಜನೆ : ಯುವಕರಿಗೆ ಉದ್ಯೋಗಾವಕಾಶ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಎಂಪ್ಲಾಯ್ಮೆಂಟ್ ಲಿಂಕ್ಡ್ ಇನ್ಸೆಂಟಿವ್ ಯೋಜನೆ ಆರಂಭಿಸಿದೆ. ಮೊದಲ ಬಾರಿಗೆ ಉದ್ಯೋಗ ಪಡೆಯುವ ಯುವಕರಿಗೆ ರೂ. 15,000 ಪ್ರೋತ್ಸಾಹ ಧನ, ಹೊಸ ಉದ್ಯೋಗ ಸೃಷ್ಟಿಸುವ ಕಂಪನಿಗಳಿಗೆ ವಿಶೇಷ ಇನ್ಸೆಂಟಿವ್, ಆಗಸ್ಟ್ 1ರಿಂದ ಜಾರಿಗೆ ತರಲಾಗಿದೆ. ಯೋಜನೆಗೆ ರೂ. 1 ಲಕ್ಷ ಕೋಟಿ ಮೀಸಲು ಇರಿಸಲಾಗಿದೆ. ಈ ಯೋಜನೆ ಖಾಸಗಿ ವಲಯದಲ್ಲಿ ಉದ್ಯೋಗ ಸೃಷ್ಟಿಗೆ ಮಹತ್ವದ ವೇಗ ನೀಡುತ್ತಿದೆ.
ಮಿಷನ್ ಸುದರ್ಶನ ಚಕ್ರ : ರಕ್ಷಣಾ ವಲಯದಲ್ಲಿ ಸ್ವಾವಲಂಬನೆ, ರಕ್ಷಣಾ ಕ್ಷೇತ್ರದಲ್ಲಿ ಭಾರತ ಮತ್ತೊಂದು ಐತಿಹಾಸಿಕ ಹೆಜ್ಜೆ ಇಟ್ಟಿದೆ. ಶ್ರೀಕೃಷ್ಣನ ಸುದರ್ಶನ ಚಕ್ರದಿಂದ ಪ್ರೇರಿತವಾದ ‘ಮಿಷನ್ ಸುದರ್ಶನ ಚಕ್ರ’ ಯೋಜನೆಯಡಿ, ಇಸ್ರೇಲ್ನ ಐರನ್ ಡೋಮ್ ಮಾದರಿಯ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಯನ್ನು ದೇಶದಲ್ಲೇ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ. ಈ ಯೋಜನೆಯಿಂದ, ರಕ್ಷಣಾ ಸ್ವಾವಲಂಬನೆ ಬಲಪಡಿಕೆ, ಆಮದು ಅವಲಂಬನೆ ಕಡಿತ, ರಾಷ್ಟ್ರದ ಭದ್ರತೆ ಮತ್ತಷ್ಟು ಗಟ್ಟಿಯಾಗಿದೆ.
ವಿಕಸಿತ ಭಾರತದತ್ತ ದಿಟ್ಟ ಹೆಜ್ಜೆ : 2025ರಲ್ಲಿ ಜಾರಿಯಾದ ಈ ಮಹತ್ವದ ನಿರ್ಣಯಗಳು ಭಾರತವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ತಾಂತ್ರಿಕವಾಗಿ ಬಲಿಷ್ಠ ರಾಷ್ಟ್ರವಾಗಿಸುವ ದಿಕ್ಕಿನಲ್ಲಿ ಕೊಂಡೊಯ್ಯುತ್ತಿವೆ. ಮೋದಿ ಸರ್ಕಾರದ ಈ ಸುಧಾರಣೆಗಳು ವಿಕಸಿತ ಭಾರತ 2047ರ ಕನಸಿಗೆ ಭದ್ರ ಅಡಿಗಲ್ಲುಗಳಾಗಿವೆ.