ನವದೆಹಲಿ, ಡಿ. 22 (DaijiworldNews/AK): ಗಣಿತ ಅನೇಕರಿಗೆ ಕಬ್ಬಿಣದ ಕಡಲೆಕಾಯಿ. ಇನ್ನು ಕೆಲವರು ನೀರು ಕುಡಿದಷ್ಟು ಸುಲಭವಾಗಿ ಲೆಕ್ಕವನ್ನು ಮಾಡ್ತಾರೆ. ಅಂದಹಾಗೇ ಈ ಲೆಕ್ಕಾಚಾರ ಎನ್ನುವಂತದ್ದು ನಮ್ಮ ದೈನಂದಿನ ಬದುಕಿಗೆ ಬಹುಮುಖ್ಯ. ಹೀಗಾಗಿ ಗಣಿತದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಖ್ಯಾತ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರು ಗಣಿತ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಲು ಹಾಗೂ ಅವರ ಸಾಧನೆಗಳನ್ನು ಗೌರವಿಸಲು ಡಿಸೆಂಬರ್ 22 ರಂದು ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಗುತ್ತದೆ.

ರಾಷ್ಟ್ರೀಯ ಗಣಿತ ದಿನದ ಮಹತ್ವವೇನು?
ಡಿಸೆಂಬರ್ 2011 ರಲ್ಲಿ, ಭಾರತ ಸರ್ಕಾರ ಡಿಸೆಂಬರ್ 22 ರಂದು ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲು ನಿರ್ಧರಿಸಿತು. 2012 ರಲ್ಲಿ ಆಗಿನ ಪ್ರಧಾನಮಂತ್ರಿಯಾಗಿದ್ದ ಡಾ. ಮನಮೋಹನ್ ಸಿಂಗ್ ಅವರು ಡಿಸೆಂಬರ್ 22 ಅಂದರೆ ಶ್ರೀನಿವಾಸ್ ರಾಮಾನುಜನ್ ಅವರ ಜನ್ಮಜಯಂತಿಯನ್ನು ರಾಷ್ಟ್ರೀಯ ಗಣಿತ ದಿನವಾಗಿ ಆಚರಿಸಲು ಕರೆಕೊಟ್ಟರು. ಅಂದಿನಿಂದ ಪ್ರತಿವರ್ಷ ಡಿಸೆಂಬರ್ 22 ರಂದು ರಾಷ್ಟ್ರೀಯ ಗಣಿತ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಶ್ರೀನಿವಾಸ ರಾಮಾನುಜನ್ ಒಬ್ಬ ಶ್ರೇಷ್ಠ ಭಾರತೀಯ ಗಣಿತಜ್ಞ. ಅವರು ಡಿಸೆಂಬರ್ 22, 1887 ರಂದು ತಮಿಳುನಾಡಿನಲ್ಲಿ ಜನಿಸಿದರು. ಇವರಿಗಿದ್ದ ಗಣಿತದ ಮೇಲಿನ ಪ್ರೀತಿ ಇವರ ಉನ್ನತ ಸಾಧನೆಗೆ ಮೆಟ್ಟಿಲಾಯಿತು. ಮತ್ತು ಗಣಿತ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದರು. ರಾಮಾನುಜನ್ ಅನೇಕ ಸಂಕೀರ್ಣ ಗಣಿತ ವಿಷಯಗಳ ಮೇಲೆ ಕೆಲಸ ಮಾಡಿದರು. ಅವರು ಸಂಖ್ಯಾ ಸಿದ್ಧಾಂತ, ಅನಂತ ಸರಣಿಗಳಂತಹ ವಿಷಯಗಳಲ್ಲಿ ಹೊಸ ಸೂತ್ರಗಳನ್ನು ಪರಿಚಯಿಸಿದರು. ಅವರು ಸರಿಸುಮಾರು 3,900 ಸೂತ್ರಗಳು ಮತ್ತು ಫಲಿತಾಂಶಗಳನ್ನು ಪ್ರಸ್ತುತಪಡಿಸಿದರು. ಇಂದಿಗೂ ರಾಮಾನುಜನ್ ಅವರನ್ನು ಸಾರ್ವಕಾಲಿಕ ಭಾರತದ ಶ್ರೇಷ್ಠ ಗಣಿತಜ್ಞರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.