ನವದೆಹಲಿ, ಡಿ. 22 (DaijiworldNews/AA): ಬಾಂಗ್ಲಾದಲ್ಲಿ ಬಲವಿಲ್ಲದ ಮುಹಮ್ಮದ್ ಯೂನಸ್ ನೇತೃತ್ವದ ಸರ್ಕಾರದಿಂದ ಕಾನೂನು ಸುವ್ಯವಸ್ಥೆ ವಿಫಲವಾಗಿದೆ ಎಂದು ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರದ ವಿಚಾರವಾಗಿ ಭಾರತದಲ್ಲಿ ರಕ್ಷಣೆ ಪಡೆದಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಮಧ್ಯಂತರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂಕಿಲಾಬ್ ಮೊಂಚೊ ಸಂಚಾಲಕ ಷರೀಫ್ ಉಸ್ಮಾನ್ ಹಾದಿ ಹತ್ಯೆ ಬಳಿಕ ಉಂಟಾಗಿರುವ ಅಶಾಂತಿಯು ಮಧ್ಯಂತರ ಸರ್ಕಾರದ ಕಾನೂನು ಸುವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಹಿಂಸಾಚಾರದ ನಂತರ ಢಾಕಾ ಸಾಮಾನ್ಯ ಸ್ಥಿತಿಗೆ ಮರಳಲು ಹೆಣಗಾಡುತ್ತಿದೆ. ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಈ ಮೂಲಕ ಉಗ್ರಗಾಮಿ ಶಕ್ತಿಗಳು ನೆಲೆ ಪಡೆಯಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಕಿಡಿಕಾರಿದ್ದಾರೆ.
ʻನವ ಬಾಂಗ್ಲಾದೇಶದಲ್ಲಿ ಅಂತಹ ಹಿಂಸಾಚಾರಕ್ಕೆ ಎಂದಿಗೂ ಜಾಗವಿಲ್ಲ. ಈ ಕ್ರೂರ ಅಪರಾಧದಲ್ಲಿ ಭಾಗಿಯಾಗಿರುವ ಯಾರಿಗೂ ವಿನಾಯಿತಿ ಕೊಡಲ್ಲ. ಕೃತ್ಯದಲ್ಲಿ ಭಾಗಿಯಾಗಿರುವ ಯಾರನ್ನೂ ಸುಮ್ಮನೆ ಬಿಡಲ್ಲʼ ಎಂದು ಸರ್ಕಾರ ಹೇಳಿಕೊಂಡಿತ್ತು. ಇದರ ಬೆನ್ನಲ್ಲೇ ಮಾಜಿ ಪ್ರಧಾನಿ ಶೇಖ್ ಹಸೀನಾ ಅಸಮಾಧಾನ ಹೊರಹಾಕಿದ್ದಾರೆ.