ಕೇರಳ, ಡಿ. 22 (DaijiworldNews/AK): ಯುಪಿಎಸ್ಸಿ ಪರೀಕ್ಷೆಯು ದೇಶದಲ್ಲಿ ಮಾತ್ರವಲ್ಲದೆ, ವಿಶ್ವದಲ್ಲೇ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳು ಇದಕ್ಕೆ ಹಾಜರಾಗುತ್ತಾರೆ. ಆದರೆ ಯಾರಾದರೂ ವೀಲ್ಚೇರ್ನಲ್ಲಿ ಅಥವಾ ಆಕ್ಸಿಜನ್ ಸಪೋರ್ಟ್ನಲ್ಲಿ ಕುಳಿತು ಈ ಪರೀಕ್ಷೆಯನ್ನು ತೆಗೆದುಕೊಳ್ಳಬಹುದೆಂದು ನೀವು ಎಂದಾದರೂ ಊಹಿಸಿದ್ದೀರಾ?. ಏಕೆಂದರೆ ಲತಿಶಾ ಅನ್ಸಾರಿ ಮಾಡಿದ್ದು ಅದನ್ನೇ. ಕೇರಳದ ಈ ಧೈರ್ಯಶಾಲಿ ಹುಡುಗಿ ತನ್ನ ಕನಸುಗಳನ್ನು ಬೆನ್ನಟ್ಟಿದ್ದಲ್ಲದೆ, ಪ್ರತಿಯೊಂದು ಸವಾಲನ್ನೂ ಜಯಿಸಿದ್ದಾರೆ. ಕುತೂಹಲಕಾರಿಯಾದ ಲತಿಶಾ ಅನ್ಸಾರಿ ಅವರ ಸ್ಟೋರಿ ಇಲ್ಲಿದೆ.

ಲತಿಷಾ ಅನ್ಸಾರಿ ಮೂಲತಃ ಕೇರಳದವರು. 2019 ರಲ್ಲಿ ಯುಪಿಎಸ್ಸಿ ಪ್ರಿಲಿಮ್ಸ್ ಸಮಯದಲ್ಲಿ ಅವರ ಹೆಸರು ಸುದ್ದಿಯಲ್ಲಿತ್ತು. ಆದರೆ ಅವರ ಕಥೆ ಸುಲಭವಾಗಿ ಇರಲಿಲ್ಲ. ಸಾವಿರಕ್ಕೂ ಹೆಚ್ಚು ಮೂಳೆ ಮುರಿತಗಳಿಂದ ಬಳಲುತ್ತಿದ್ದ ಇವರು ವೀಲ್ಚೇರ್ ಮತ್ತು ಆಕ್ಸಿಜನ್ ಬೆಂಬಲದಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳುವುದು ಸಾಕಷ್ಟು ಸವಾಲಿನದ್ದಾಗಿತ್ತು. ಸಂಕಲ್ಪ ಬಲವಾಗಿದ್ದರೆ ದೈಹಿಕ ಮಿತಿಗಳು ಸಹ ತಡೆಗೋಡೆಯಾಗಲು ಸಾಧ್ಯವಿಲ್ಲ ಎಂದು ಅವರ ಧೈರ್ಯ ಮತ್ತು ದೃಢಸಂಕಲ್ಪ ತೋರಿಸುತ್ತದೆ.
ಲತಿಷಾ ಟೈಪ್ 2 ಆಸ್ಟಿಯೋಜೆನೆಸಿಸ್ ಇಂಪರ್ಫೆಕ್ಟಾ (ಮೂಳೆ ದೌರ್ಬಲ್ಯ)ದಿಂದ ಜನಿಸಿದರು. 2018 ರಿಂದ, ಶ್ವಾಸಕೋಶದ ಅಧಿಕ ರಕ್ತದೊತ್ತಡವು ಅವಳ ಉಸಿರಾಟದ ಮೇಲೂ ಪರಿಣಾಮ ಬೀರಿತು. ಯಾವುದೇ ಸಾಮಾನ್ಯ ವ್ಯಕ್ತಿ ಅಂತಹ ಸಂದರ್ಭಗಳಲ್ಲಿ ಸುಮ್ಮನಿರುತ್ತಿದ್ದರು. ಆದರೆ ಲತಿಷಾ ಹಾಗೇ ಮಾಡಲಿಲ್ಲ. ಆಕೆಯ ಪೋಷಕರು ಅವಳನ್ನು ಪ್ರತಿ ಹಂತದಲ್ಲೂ ಸಪೋರ್ಟ್ ಮಾಡಿದರು. ಅಷ್ಟೇ ಅಲ್ಲ, ಅಧ್ಯಯನಕ್ಕೆ ಸಹಾಯ ಮಾಡಿದರು. ಇದೇ ಬೆಂಬಲ ಅವಳಿಗೆ ಧೈರ್ಯ ತುಂಬುವಲ್ಲಿ ದೊಡ್ಡ ಶಕ್ತಿಯಾಯಿತು.
ಶಾಲೆಗೆ ಸೇರುವುದಕ್ಕೂ ಕೂಡ ಬಹಳ ಕಷ್ಟಪಟ್ಟಳು. ಅವಳ ದೈಹಿಕ ಸ್ಥಿತಿ ಗಮನಿಸಿದ ಅನೇಕ ಶಾಲೆಗಳು ಪ್ರವೇಶ ಕೊಡಲು ನಿರಾಕರಿಸಿದವು. ಆದರೂ ಲತೀಶಾ ಬಿಡಬೇಕಲ್ಲ. ಕೊನೆಗೂ ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಸ್ನಾತಕೋತ್ತರ ಪದವಿಯಲ್ಲಿ ಉತ್ತೀರ್ಣರಾದರು. ಯುಪಿಎಸ್ಸಿ ಪ್ರಿಲಿಮ್ಸ್ ನಂತರ ಲತೀಶಾಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಪರೀಕ್ಷಾ ಕೇಂದ್ರದಲ್ಲಿ ಉಚಿತ ಪೋರ್ಟಬಲ್ ಆಮ್ಲಜನಕ ಸಾಂದ್ರೀಕರಣ ವ್ಯವಸ್ಥೆಯನ್ನು ಮಾಡುವಲ್ಲಿ ಕೊಟ್ಟಾಯಂ ಜಿಲ್ಲಾಧಿಕಾರಿ ಪ್ರಮುಖ ಪಾತ್ರ ವಹಿಸಿದರು.
ಲತಿಷಾ ಅವರ ಚಿಕಿತ್ಸೆಗೆ ತಿಂಗಳಿಗೆ ಸುಮಾರು 25,000 ರೂ. ವೆಚ್ಚವಾಯಿತು. ಆದರೆ ಅವರ ಅಲ್ಪಾವಧಿಯ ಜೀವಿತಾವಧಿಯಲ್ಲಿ ದೊಡ್ಡ ಕನಸುಗಳನ್ನು ಕಂಡು ನನಸಾಗಿಸಲು ಶ್ರಮಿಸಿದರು. ಜೂನ್ 16, 2021 ರಂದು ಕೇವಲ 27 ನೇ ವಯಸ್ಸಿನಲ್ಲಿ ನಿಧನರಾದರು. ಅವರ ಕಥೆ ಎಲ್ಲರಿಗೂ ಒಂದು ಸ್ಫೂರ್ತಿಯಾಯ್ತು. ದೈಹಿಕ ಅಂಗವೈಕಲ್ಯವು ದೌರ್ಬಲ್ಯವಲ್ಲ. ಬದಲಿಗೆ ಧೈರ್ಯ ಮತ್ತು ಚೈತನ್ಯದ ಪರೀಕ್ಷೆ ಎಂಬುದನ್ನ ಲತಿಷಾ ಅನ್ಸಾರಿ ತೋರಿಸಿ ಕೊಟ್ಟಿದ್ದರು