ಕೊಚ್ಚಿ, ಡಿ.20 (DaijiworldNews/TA): ಖ್ಯಾತ ಮಲಯಾಳಂ ನಟ, ನಿರ್ದೇಶಕ ಹಾಗೂ ಚಿತ್ರಕಥೆಗಾರ ಶ್ರೀನಿವಾಸನ್ ಶನಿವಾರ ಬೆಳಿಗ್ಗೆ ಕೊಚ್ಚಿ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಚಲನಚಿತ್ರೋದ್ಯಮ ಮೂಲಗಳು ತಿಳಿಸಿವೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.

ಅಸ್ವಸ್ಥತೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಶುಕ್ರವಾರ ರಾತ್ರಿ ತ್ರಿಪುನಿತುರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಅವರು ಕೊನೆಯುಸಿರೆಳೆದರು.
ಕಣ್ಣೂರು ಮೂಲದ ಶ್ರೀನಿವಾಸನ್ ಕಳೆದ ಹಲವು ವರ್ಷಗಳಿಂದ ಕೊಚ್ಚಿಯಲ್ಲಿ ವಾಸಿಸುತ್ತಿದ್ದರು. ನಟನೆಯ ಜೊತೆಗೆ ಅವರು ನಿರ್ದೇಶಕ, ಚಿತ್ರಕಥೆಗಾರ, ಡಬ್ಬಿಂಗ್ ಕಲಾವಿದ ಹಾಗೂ ನಿರ್ಮಾಪಕರಾಗಿ ಮಲಯಾಳಂ ಚಿತ್ರರಂಗದಲ್ಲಿ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದರು.
1976ರಲ್ಲಿ ಮಣಿಮುಳಕ್ಕಂ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು, ತಮ್ಮ ದೀರ್ಘ ಚಲನಚಿತ್ರ ಜೀವನದಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಸ್ಯ, ವ್ಯಂಗ್ಯ ಮತ್ತು ಸಾಮಾಜಿಕ ಸಂದೇಶಗಳನ್ನು ಒಟ್ಟುಗೂಡಿಸುವ ಅವರ ವಿಶಿಷ್ಟ ಶೈಲಿ ಪ್ರೇಕ್ಷಕರ ಮನಗೆದ್ದಿತ್ತು.
ಅವರ ಅಗಲಿಕೆ ಮಲಯಾಳಂ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎನ್ನಲಾಗಿದೆ. ಮಕ್ಕಳಾದ ನಟ ಹಾಗೂ ನಿರ್ದೇಶಕ ವಿನೀತ್ ಶ್ರೀನಿವಾಸನ್, ನಟ ಧ್ಯಾನ್ ಶ್ರೀನಿವಾಸನ್ ಪತ್ನಿಯನ್ನು ಅಗಲಿದ್ಧಾರೆ.