ಬೆಳಗಾವಿ, 19 (DaijiworldNews/AK):ಈ ಸರಕಾರದ್ದು ಸುಳ್ಳೇ ಸುಳ್ಳು. ಮುಖ್ಯಮಂತ್ರಿ ಅಪ್ಪಟ ಸುಳ್ಳುಗಾರ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಟೀಕಿಸಿದ್ದಾರೆ.

ಮಾಧ್ಯಮಗಳ ಜೊತೆ ಇಂದು ಇಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಏನೋ ಅನುದಾನ ಪ್ರಕಟಿಸುತ್ತಾರೆ. ರಸ್ತೆಗಳೆಲ್ಲ ಸರಿಯಾಗಲಿದೆ. ಆಸ್ಪತ್ರೆ ಸರಿಯಾಗುತ್ತದೆ; ಕರೆಂಟ್ ಬರಲಿದೆ ಎಂದು ಜನರು ಆಶಾವಾದದಲ್ಲಿದ್ದರು. ಇವರು ಉತ್ತರ ಕರ್ನಾಟಕದ ದೀಪ ಆರಿಸಿದ್ದಾರೆ. ಕರೆಂಟೇ ತೆಗೆದಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ಸಿನವರು ಉತ್ತರ ಕರ್ನಾಟಕಕ್ಕೆ ದೊಡ್ಡ ಅನ್ಯಾಯ ಮಾಡಿದ್ದಾರೆ. ಯಾವುದೇ ಹಣ ಘೋಷಿಸದೇ, ಅಭಿವೃದ್ಧಿ ಕಾರ್ಯ ಪ್ರಕಟಿಸದೇ ಅನ್ಯಾಯ ಮಾಡಿದ್ದಾರೆ. ಕೇವಲ ಕೇಂದ್ರ ಸರಕಾರದ ಮೇಲೆ ಆಪಾದನೆ ಮಾಡಿದ್ದಾರೆ. ಕೇಂದ್ರ ಸರಕಾರ ಕೊಟ್ಟ ರೈಲ್ವೆ ಯೋಜನೆಗೆ ಜಮೀನು ಕೊಟ್ಟಿಲ್ಲ; ಇದು ಇವರ ಯೋಗ್ಯತೆ ಎಂದು ವಾಗ್ದಾಳಿ ನಡೆಸಿದರು.
ಯಲ್ಲಮ್ಮ ದೇವಸ್ಥಾನಕ್ಕೆ ಪ್ರಸಾದ ಯೋಜನೆಗೆ 213 ಕೋಟಿ ಕೇಂದ್ರವು ನೀಡಿದ್ದರೆ, ಅದನ್ನು ಪ್ರಾರಂಭಿಸಲು ಯೋಗ್ಯತೆ ಇಲ್ಲ; ಬೆಳಗಾವಿಯ ಕೆರೆಗಳಿಗೆ ಸುಮಾರು 50 ಕೋಟಿ ಹಣ ಕೊಟ್ಟರೆ ಉಪಯೋಗಿಸುವ ಯೋಗ್ಯತೆ ಇಲ್ಲ ಎಂದು ಟೀಕಿಸಿದರು. ಜಲಜೀವನ್ ಯೋಜನೆಗೆ ಬಿಲ್ ನೀಡದ ಕಾರಣ ಹಣ ಬಂದಿಲ್ಲ ಎಂದು ವಿವರಿಸಿದರು.
ಕಾಂಗ್ರೆಸ್ ಪಾರ್ಟಿ ಸುಳ್ಳಿನ ಮನೆ ಎಂದು ಅವರು ಆರೋಪ ವ್ಯಕ್ತಪಡಿಸಿದರು. ಸುಳ್ಳೇ ಕಾಂಗ್ರೆಸ್ ಪಕ್ಷದ ಧ್ಯೇಯ; ಮನೆ ದೇವರು ಎಂದು ಅವರು ದೂರಿದರು. ಮೊನ್ನೆ ಮಹೇಶ್ ಟೆಂಗಿನಕಾಯಿಯವರು 5 ಸಾವಿರ ಕೋಟಿ ಗೃಹಲಕ್ಷ್ಮಿ ಹಣ ಬಾಕಿ ವಿಚಾರ ಪತ್ತೆ ಮಾಡಿದ್ದಾರೆ. ಅದನ್ನು ಕೊಟ್ಟರೇ; ಅದನ್ನು ಕೊಟ್ಟಿಲ್ಲ. ಹಣ ಎಲ್ಲಿ ಹೋಗಿದೆ ಎಂದರೆ, ಹುಡುಕುತ್ತಿದ್ದೇವೆ ಎನ್ನುತ್ತಾರೆ. ಇದು ಸಾಲದ ಸರಕಾರ ಎಂದು ದೂರಿದರು. ಸಾಲ ಮಾಡಿ ತುಪ್ಪ ತಿಂದು, ಭ್ರಷ್ಟಾಚಾರ ಮಾಡಿ ಲೂಟಿ ಹೊಡೆದು ಹೋಗುವ ಸರಕಾರ ಇದೆಂದು ಟೀಕಿಸಿದರು.
ಈ ಅಧಿವೇಶನದಲ್ಲಿ ಸರಕಾರದಲ್ಲಿ ಒಗ್ಗಟ್ಟಿಲ್ಲ; ಡಿನ್ನರ್- ಬ್ರೇಕ್ಫಾಸ್ಟ್ ಪಾರ್ಟಿಗಳೇ ಆಗಿ ಹೋಗಿದೆ. ಮುಖ್ಯಮಂತ್ರಿಗೆ ಗೌರವ ಕೊಡುತ್ತಿಲ್ಲ; ಅವರ ಭಾಷಣದ ವೇಳೆ ಕೇವಲ 6 ಸಚಿವರಿದ್ದರು. ಸಾಕಷ್ಟು ಶಾಸಕರೂ ಇರಲಿಲ್ಲ ಎಂದು ಗಮನ ಸೆಳೆದರು. ಉಪ ಮುಖ್ಯಮಂತ್ರಿಯೂ ಇರಲಿಲ್ಲ. ಸಚಿವರ ಸಂಖ್ಯೆ ಆಮೇಲೆ 7ಕ್ಕೆ ಹೋಗಿ, ಬಳಿಕ 5 ಸಚಿವರ ಹಾಜರಾತಿ ಇತ್ತು. ಒಗ್ಗಟ್ಟಾಗಿದ್ದೇವೆ ಎನ್ನುತ್ತಾರೆ. ಇದು ಗ್ಯಾರಂಟಿ ಇಲ್ಲದ ಸರಕಾರ, ಮುಖ್ಯಮಂತ್ರಿ ಎಂದು ತಿಳಿಸಿದರು.
ಅಧಿವೇಶನದ ವೇದಿಕೆಯನ್ನು ಅವರು ಸೀಟು ಸೀಟು ಭದ್ರಪಡಿಸಲು ಉಪಯೋಗಿಸಿಕೊಂಡರೇ ಹೊರತು ಉತ್ತರ ಕರ್ನಾಟಕದ ಜನರ ಅಭಿವೃದ್ಧಿಯ ಸೀಟನ್ನು ಬಲಪಡಿಸಲು ಉಪಯೋಗಿಸಿಲ್ಲ; ಕಾಂಗ್ರೆಸ್ ಪಕ್ಷದ ವಿಫಲತೆ ಇದಾಗಿದೆ ಎಂದರು.