ನವದೆಹಲಿ,19 (DaijiworldNews/AK): ನಟ, ನಟಿಯರನ್ನು ಕಾಡುತ್ತಿದ್ದ ಡೀಪ್ ಫೇಕ್ ಈಗ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರಿಗೂ ತಟ್ಟಿದೆ. ಹೂಡಿಕೆ ಹಗರಣ ಸಂಬಂಧ ತಮ್ಮ ಡೀಪ್ ಫೇಕ್ ( ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.


ದೆಹಲಿಯ ಸಂಸತ್ ಭವನ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಎಐ ದುರ್ಬಳಕೆ ಮಾಡಿಕೊಂಡು ನಕಲಿ ವಿಡಿಯೋ ಸೃಷ್ಟಿಸಲಾಗಿದೆ. ಎಲ್ಲಾ ಹೂಡಿಕೆದಾರರಿಗೆ ನಾನು ಹೇಳೋದೇನಂದ್ರೆ, ಯಾವುದೇ ಸಮಯದಲ್ಲೂ ನಾನು ಹೂಡಿಕೆ ಬಗ್ಗೆ ಮಾತನಾಡಲ್ಲ. ಹೂಡಿಕೆ ವಿಚಾರದಲ್ಲಿ ನನ್ನ ಮುಖ ಎಂದಿಗೂ ನೀವು ನೋಡಲ್ಲ. ನೀವು ನೋಡಿದ್ದರೆ, ಅದು ಖಂಡಿತಾ ನಕಲಿ ವಿಡಿಯೋ ಅಂತಾ ಹೇಳಿದ್ದಾರೆ.
ನೀವು ಕಷ್ಟಪಟ್ಟು ಸಂಪಾದಿಸಿದ ಹಣ ಹೂಡಿಕೆ ಮಾಡುವ ಮುನ್ನ ಯೋಚಿಸಿ. ಬ್ಯಾಂಕುಗಳಲ್ಲಿ ಆ ಖಾತೆ ಅಥವಾ ಯೋಜನೆಯ ಬಗ್ಗೆ ಖಚಿತಪಡಿಸಿಕೊಳ್ಳಿ, ನಂತರ ಹೂಡಿಕೆ ಮಾಡಿ. ಆದ್ರೆ ನನ್ನ ವಿಷಯಲ್ಲಿ ಆ ರೀತಿ ಇರೋದಿಲ್ಲ. ಹಣದ ಹೂಡಿಕೆ ಕುರಿತು ವಿಡಿಯೋದಲ್ಲಿ ನನ್ನ ಮುಖ ನೋಡಿದ್ದೀರಿ ಅಥವಾ ಧ್ವನಿ ಕೇಳಿದ್ದೀರಿ ಅಂದ್ರೆ ಖಂಡಿತಾ ಅದು ನಕಲಿ ಸುದ್ದಿ ಅಂತ ಸ್ಪಷ್ಟಪಡಿಸಿದ್ದಾರೆ.
ಡೀಪ್ ಫೇಕ್ ತಂತ್ರಜ್ಞಾನದಲ್ಲಿ ಯಾವುದೇ ಅನುಮಾನ ಬಾರದಂತೆ ಫೋಟೋ ಅಲ್ಲ ವಿಡಿಯೋವನ್ನೇ ಸೃಷ್ಟಿ ಮಾಡಲಾಗುತ್ತದೆ. ವಿಡಿಯೋ ಎಷ್ಟು ನೈಜತೆ ಇರುತ್ತದೆ ಅಂದರೆ ವ್ಯಕ್ತಿಯ ದೇಹಕ್ಕೂ ಮತ್ತು ಮುಖಕ್ಕೆ ನೇರ ಸಂಬಂಧ ಇದ್ದಂತೆ ಇರುತ್ತದೆ. ಮೂಲ ವಿಡಿಯೋ ಬೇರೆ ಆಗಿದ್ದರೂ ಈ ವ್ಯಕ್ತಿಯೇ ವಿಡಿಯೋದಲ್ಲಿ ನಟಿಸುತ್ತಿದ್ದಂತೆ ಬಿಂಬಿಸಲಾಗುತ್ತದೆ.